ಬಾಗಲಕೋಟೆ: ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಆತ್ಮ ನಿರ್ಭರ ಯೋಜನೆಯಡಿ ಬೀದಿ ಬದಿ ವ್ಯಾಪಾರಸ್ಥರಿಗೆ ಸಾಲ ನೀಡುವ ಉದ್ದೇಶದಿಂದ ವಿವಿಧ ಬ್ಯಾಂಕ್‍ಗಳ ಮೂಲಕ ಜಿಲ್ಲೆಯಾದ್ಯಂತ ಸಾಲ ಮೇಳ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ಕೆ. ರಾಜೇಂದ್ರ ತಿಳಿಸಿದರು.
ಜಿಲ್ಲಾಡಳಿತ ಭವನದಲ್ಲಿ ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಸ್ಥರ ಆತ್ಮ ನಿಧಿ ಯೋಜನೆಯ ವಿವಿಧ ಬ್ಯಾಂಕ್‍ಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಜಿಲ್ಲೆಯ ಎಲ್ಲ ಬ್ಯಾಂಕರ್ಸ್ ಇಲಾಖೆಯೊಂದಿಗೆ ಸಹಕಾರ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರದ ಯೋಜನೆಗಳ ಅರ್ಹ ಫಲಾನುಭವಿಗಳಿಗೆ ಸಾಲ ವಿತರಿಸುವ ಕಾರ್ಯ ನೂರಕ್ಕೆ ನೂರರಷ್ಟಾಗಬೇಕು ಎಂದರು.
ಬೇರೆ ಬೇರೆ ಜಿಲ್ಲೆಗಳಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಸಾಕಷ್ಟು ಸಾಲ ವಿತರಿಸಿವೆ. ಜಿಲ್ಲೆಯಲ್ಲಿಯೂ ಸಹ ನಿಗದಿತ ಅವಧಿಯೊಳಗೆ ಸಾಲ ವಿತರಣೆಗೆ ಕ್ರಮಕೈಗೊಳ್ಳಬೇಕು. ಈ ಯೋಜನೆ ಕಳೆದ ವರ್ಷ ಜೂನ್ 1 ರಿಂದ ಪ್ರಾರಂಭವಾಗಿದ್ದು, ಪ್ರತಿ ಫಲಾನುಭವಿಗಳಿಗೆ ತಲಾ 10 ಸಾವಿರ ಸಾಲ ನೀಡುವ ಯೋಜನೆ ಇದಾಗಿದೆ. ಜಿಲ್ಲೆಯಲ್ಲಿ ಒಟ್ಟು 6694 ಫಲಾನುಭವಿಗಳ ಪೈಕಿ 2334 ಜನರಿಗೆ ಮಾತ್ರ ಸಾಲ ಮಂಜೂರಾತಿ ನೀಡಲಾಗಿದೆ. 1940 ಮಂಜೂರಾತಿ ಪ್ರಕ್ರಿಯೆಯಲ್ಲಿದ್ದು, ಇನ್ನು 2420 ಬಾಕಿ ಉಳಿದಿವೆ. ಶೇ.34 ರಷ್ಟು ಮಾತ್ರ ಪ್ರಗತಿ ಸಾಧನೆಯಾಗಿರುವುದನ್ನು ಕಂಡು ಜಿಲ್ಲಾಧಿಕಾರಿಗಳು ವಿಷಾಧ ವ್ಯಕ್ತಪಡಿಸಿದರು.
ನಗರ ಸ್ಥಳೀಯ ಸಂಸ್ಥೆಗಳಾದ ಅಮೀನಗಡದಲ್ಲಿ 155 ಅರ್ಜಿಗಳ ಪೈಕಿ 39, ಬಾದಾಮಿ 328 ಪೈಕಿ 73, ಬಾಗಲಕೋಟೆ 776 ಪೈಕಿ 157, ಬೆಳಗಲಿ 180 ಪೈಕಿ 164, ಬೀಳಗಿ 172 ಪೈಕಿ 88, ಗುಳೇದಗುಡ್ಡ 278 ಪೈಕಿ 67, ಹುನಗುಂದ 251 ಪೈಕಿ 72, ಇಳಕಲ್ 605 ಪೈಕಿ 256, ಜಮಖಂಡಿ 987 ಪೈಕಿ 343, ಕಮತಗಿ 152 ಪೈಕಿ 38, ಕೆರೂರ 350 ಪೈಕಿ 82, ಮಹಾಲಿಂಗಪೂರ 488 ಪೈಕಿ 42, ಮುಧೋಳ 654 ಪೈಕಿ 210, ರಬಕವಿ ಬನಹಟ್ಟಿ 948 ಪೈಕಿ 517 ಹಾಗೂ ತೇರದಾಳ 362 ಪೈಕಿ 186 ಫಲಾನುಭವಿಗಳಿಗೆ ಮಾತ್ರ ಸಾಲ ವಿತರಣೆಗೆ ಮಂಜೂರಾತಿ ನೀಡಲಾಗಿದೆ. ಉಳಿದವರಿಗೆ ಯಾಕೆ ನೀಡಿಲ್ಲವೆಂದು ಪ್ರಶ್ನಿಸಿದರು.