ಬಾಗಲಕೋಟೆ: ಜಿಲ್ಲೆಯಲ್ಲಿ ನಾಳೆ ಎರಡನೇ ಹಂತದ ಚುನಾವಣೆ ನಡೆಯಲಿದ್ದು, ಐದು ತಾಲೂಕಿನ 102 ಗ್ರಾಮ ಪಂಚಾಯತಿಗಳಲ್ಲಿ ಮತದಾನ ನಡೆಯಲಿದೆ. ಈ ಬಗ್ಗೆ ಜಿಲ್ಲಾಡಳಿತವು ಸಕಲ ಸಿದ್ದತೆ ಮಾಡಿಕೊಂಡಿದೆ.
ಬಾದಾಮಿ ಮತ್ತು ಗುಳೇದಗುಡ್ಡದಲ್ಲಿ ಸ್ಥಾಪಿಸಲಾದ ಮಸ್ಟರಿಂಗ್ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ಕೆ. ರಾಜೇಂದ್ರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಸೇರಿದಂತೆ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಎರಡನೇ ಹಂತದಲ್ಲಿ ಜಿಲ್ಲೆಯ ಬಾಗಲಕೋಟೆ, ಬಾದಾಮಿ, ಹುನಗುಂದ, ಇಲಕಲ್ಲ, ಗುಳೇದಗುಡ್ಡ ತಾಲೂಕುಗಳ ಒಟ್ಟು 102 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಯಲಿದೆ. 1380 ಸ್ಥಾನಗಳಿಗೆ 3756 ಅಭ್ಯರ್ಥಿಗಳು ಅಂತಿಮ ಸ್ಪರ್ಧೆಯಲ್ಲಿ ಉಳಿದಿದ್ದಾರೆ.
ಎರಡನೇ ಹಂತದಲ್ಲಿ ಜರುಗಲಿರುವ ಚುನಾವಣೆಗೆ ಒಟ್ಟು 6,053 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಬಾಗಲಕೋಟೆ 172, ಬಾದಾಮಿ 202, ಗುಳೇದಗುಡ್ಡ 55, ಹುನಗುಂದ 104 ಹಾಗೂ ಇಲಕಲ್ಲ 120 ಮತಗಟ್ಟೆಗಳಿವೆ. ಪ್ರತಿ ಮತಗಟ್ಟೆ ಅಧಿಕಾರಿಗಳು, ಸಹಾಯಕ ಮತಗಟ್ಟೆ ಅಧಿಕಾರಿಗಳು ಪ್ರೊಸಿಡಿಂಗ್, ಪೋಲಿಂಗ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ಕೋವಿಡ್ ಮುಂಜಾಗ್ರತೆ ದೃಷ್ಟಿಯಿಂದ ಪ್ರತಿ ಮತಗಟ್ಟೆಗಳಲ್ಲಿ ಕೋವಿಡ್ ಸುರಕ್ಷತೆಗಾಗಿ ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಮಾಸ್ಕ್, ಸ್ಯಾನಿಟೈಜರ್, ಥರ್ಮಲ್ ಸ್ಕ್ಯಾನರ್ ಹಾಗೂ ಕೋವಿಡ್ ಸುರಕ್ಷತಾ ಕಿಟ್‍ಗಳನ್ನು ವಿತರಿಸಲಾಗಿದೆ.
ಎರಡನೇ ಹಂತದ ಚುನಾವಣೆಯಲ್ಲಿ 4,77,384 ಮತದಾರರಿದ್ದು, ಈ ಪೈಕಿ 2,40,007 ಪುರುಷರು, 2,37,352 ಮಹಿಳಾ ಹಾಗೂ 25 ಇತರೆ ಮತದಾರರಿದ್ದಾರೆ. ಬಾಗಲಕೋಟೆ ತಾಲೂಕಿನಲ್ಲಿ 64,005 ಪುರುಷ, 64,755 ಮಹಿಳಾ, 11 ಇತರೆ ಸೇರಿ ಒಟ್ಟು 128771 ಮತದಾರರಿದ್ದಾರೆ.
ಬಾದಾಮಿಯಲ್ಲಿ 74,641 ಪುರುಷ, 73,248 ಮಹಿಳಾ, 10 ಇತರೆ ಸೇರಿ 1,47,899 ಮತದಾರರಿದ್ದಾರೆ. ಗುಳೇದಗುಡ್ಡದಲ್ಲಿ 23,021 ಪುರುಷ, 22,287 ಮಹಿಳೆ 1 ಇತರೆ ಸೇರಿ ಒಟ್ಟು 45,309, ಹುನಗುಂದದಲ್ಲಿ 35,093 ಪುರುಷ, 34823 ಮಹಿಳಾ, 1 ಇತರೆ ಸೇರಿ ಒಟ್ಟು 69,917 ಹಾಗೂ ಇಲಕಲ್ಲಿನಲ್ಲಿ 43,247 ಪುರುಷ, 42,239 ಮಹಿಳೆ ಹಾಗೂ 2 ಇತರೆ ಸೇರಿ ಒಟ್ಟು 85,488 ಮತದಾರರು ಇದ್ದಾರೆ.