ಬಾಗಲಕೋಟೆ :ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಕೆಲವಡಿ ಗ್ರಾಮದ ಸುಕ್ಷೇತ್ರ ಶ್ರೀ ಲಕ್ಷ್ಮಿ ರಂಗನಾಥ ದೇವಾಲಯದಲ್ಲಿ ಪ್ರತಿ ವರ್ಷ ನಡೆಯುವ ಜಾತ್ರಾ ಮಹೋತ್ಸವದಲ್ಲಿ ದೇವರಿಗೆ ಭಕ್ತರು ಸರಾಯಿ ಇಟ್ಟು ಪೂಜೆ ಸಲ್ಲಿಸುತ್ತಾರೆ. ನಂತರ ದೇವರ ತೀರ್ಥ ಎಂದು ಸರಾಯಿ ಸೇವನೆ ಮಾಡುತ್ತಾರೆ.
ಈ ಬಾರಿ ಕೊರೊನಾ ಹಿನ್ನೆಲೆ ರಥೋತ್ಸವ ಸರಳವಾಗಿ ನಡೆದಿದೆ. ವಿವಿಧ ಪ್ರದೇಶಗಳಿಂದ ಆಗಮಿಸಿದ ಭಕ್ತರು, ಉತ್ತರ ಕರ್ನಾಟಕ ಶೈಲಿಯ ಆಹಾರ ಪದಾರ್ಥಗಳನ್ನು ತಂದು ದೇವರನ್ನ ಪೂಜಿಸುತ್ತಾರೆ. ಕೆಲ ಭಕ್ತರು ತಮ್ಮ ಇಷ್ಟಾರ್ಥ ಪೂರೈಸಿದರೆ, ಸರಾಯಿ ತೀರ್ಥದ ನೈವೇದ್ಯ ಮಾಡಿಸುವುದಾಗಿ ಹರಕೆ ಹೊತ್ತಿರುತ್ತಾರೆ.
ಕೆಲವಡಿಯ ಸುಕ್ಷೇತ್ರ ಶ್ರೀ ಲಕ್ಷ್ಮಿ ರಂಗನಾಥನಿಗೆ ಸರಾಯಿಯೇ ನೈವೇದ್ಯ .. ರಾಕ್ಷಸರ ಸಂಹಾರಕ್ಕೆಂದು ಬಂದ ರಂಗನಾಥ ಸ್ವಾಮಿ ಅವರನ್ನ ಸಂಹರಿಸಿದ ಬಳಿಕ ಸೋಮರಸ ತೆಗೆದುಕೊಂಡು ವಿಶ್ರಾಂತಿ ಪಡೆದನಂತೆ. ನಂತರ ಭಕ್ತರ ಇಷ್ಟಾರ್ಥಗಳನ್ನು ಪೂರೈಸಿದ್ದಾನೆ ಎಂಬುದು ಇಲ್ಲಿನ ಐತಿಹ್ಯ.
ಅಂದಿನಿಂದ ಈಗಲೂ ಭಕ್ತರು ಬಟ್ಟಿ ಇಳಿಸಿದ ಸರಾಯಿ ಸೇರಿ ಹಲವು ಬಗೆಯ ಮದ್ಯದ ಬಾಟಲ್ಗಳನ್ನು ತಂದು ದೇವರಿಗೆ ಸಮರ್ಪಿಸ್ತಾರೆ. ಜೊತೆಗೆ ತೀರ್ಥ ಎಂದು ದೇವರ ಮುಂದೆ ಸೇವನೆ ಮಾಡುತ್ತಾರೆ. ನೀರು ಬೆರೆಸದೆ ತೀರ್ಥ ರೂಪದಲ್ಲಿ ಸೇವನೆ ಮಾಡಿದಾಗ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಭಕ್ತರೊಬ್ಬರು ತಿಳಿಸಿದ್ದಾರೆ.