ಬಾಗಲಕೋಟೆ:ಪ್ರಸಕ್ತ ಸಾಲಿಗೆ ವಿವಿಧ ಯೋಜನೆಗಳಡಿ ಸರ್ಕಾರದಿಂದ ಬಿಡುಗಡೆಯಾದ ಅನುದಾನ ಸಂಪೂರ್ಣ ಬಳಕೆಯಾಗಬೇಕು. ಯಾವುದೇ ಕಾರಣಕ್ಕೂ ಹಣ ಹಿಂದಿರುಗದಂತೆ ಕ್ರಮಕೈಗೊಳ್ಳಲು ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬಿಡುಗಡೆಯಾದ ಅನುದಾನ ಸಂಪೂರ್ಣ ಬಳಕೆಯಾಗಲಿ: ಜಿ. ಪಂ ಅಧ್ಯಕ್ಷೆ ಬಾಯಕ್ಕ ಮೇಟಿ... ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾಮಗಾರಿಗಳ ಅಕ್ಟೋಬರ್ ಮಾಹೆಯ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲಾ ಪಂಚಾಯತ್ ಪಿಆರ್‍ಇಡಿ ವಿಭಾಗದಿಂದ ಕಳೆದ ಸಾಲಿನಲ್ಲಿ ಎಷ್ಟು ಅನುದಾನ ಬಿಡುಗಡೆಯಾಗಿದೆ. ಅದರಲ್ಲಿ ಲ್ಯಾಪ್ಸ್ ಆದ ಹಣವೆಷ್ಟು, ಲ್ಯಾಪ್ಸ್ ಆದ ಹಣಕ್ಕೆ ಜವಾಬ್ದಾರರು ಯಾರು ಎಂಬ ಪ್ರಶ್ನೆಗಳನ್ನು ಕೇಳಿದರು. ಅಲ್ಲದೇ ಕಳೆದ 2-3 ವರ್ಷಗಳಿಂದ ಕೈಗೊಂಡ ಕಾಮಗಾರಿ ಇನ್ನೂ ಮುಗಿದಿಲ್ಲ. ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಬೇಕು. ಪ್ರಸಕ್ತ ಸಾಲಿನ ಬಿಡುಗಡೆಯಾದ ಯಾವುದೇ ಕಾರಣಕ್ಕೂ ಹಿಂದಿರುಗದಂತೆ ಸಂಪೂರ್ಣ ಬಳಕೆಯಾಗುವಂತೆ ಕ್ರಮ ವಹಿಸಲು ಸೂಚಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಲ್ಲಿ ಕೈಗೊಂಡ ಕಾಮಗಾರಿಗಳು ಪೂರ್ಣಗೊಂಡರೂ ಬಿಲ್ಲು ಪಾವತಿಯಾಗುತ್ತಿಲ್ಲ. ಈ ಬಗ್ಗೆ ಸಾಕಷ್ಟು ದೂರುಗಳ ಬರುತ್ತಿದ್ದು, ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮವಹಿಸಲು ಸೂಚಿಸಿದರು. ವಿವಿಧ ಇಲಾಖೆಯ ಅಧಿಕಾರಿಗಳು ಯಾವುದೇ ನಿರ್ಣಯ ತೆಗೆದುಕೊಳ್ಳುವ ಮೊದಲು ಜಿ. ಪಂ. ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದು ಕ್ರಮಕೈಗೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.
ನಂತರ ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ನರೇಗಾ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಗ್ರಾಮೀಣ ಕುಡಿಯುವ ನೀರು, ಆರೋಗ್ಯ, ಪಶು ಪಾಲನೆ ಸೇರಿದಂತೆ ಇತರೆ ಇಲಾಖೆ ಹಾಗೂ ವಿವಿಧ ನಿಗಮಗಳ ಪ್ರಗತಿ ಪರಿಶೀಲನೆ ಮಾಡಿದರು.
ಕೃಷಿ ಇಲಾಖೆಯಲ್ಲಿ ಬೀಜ ವಿತರಣೆಯಲ್ಲಿ ಶೇ.77.3 ರಷ್ಟು, ರಾಸಾಯನಿಕ ಗೊಬ್ಬರ ವಿತರಣೆಯಲ್ಲಿ ಶೇ.90.9 ರಷ್ಟು, ಆಹಾರ ಧಾನ್ಯ ಉತ್ಪಾದನೆಯಲ್ಲಿ ಶೇ.82 ರಷ್ಟು ಸಾಧನೆಯಾಗಿರುವುದಾಗಿ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಮಾಹಿತಿ ನೀಡಿದರು. ತೋಟಗಾರಿಕೆ ಇಲಾಖೆಯಲ್ಲಿ ಕೇಂದ್ರ ವಲಯದ ಯೋಜನೆಗಳಲ್ಲಿ ಶೇ.72.91, ರಾಜ್ಯ ವಲಯದಲ್ಲಿ ಶೇ.91.68, ಜಿಲ್ಲಾ ವಲಯದಲ್ಲಿ ಶೇ.87 ರಷ್ಟು ಸಾಧನೆ ಮಾಡಲಾಗಿದೆ ಎಂದು ವಿವರಿಸಿದರು.
ಸಾಮಾಜಿಕ ಅರಣ್ಯದಲ್ಲಿ ಗಿಡ ಬೆಳೆಯುವ ಯೋಜನೆಯಡಿಯಲ್ಲಿ ವಾರ್ಷಿಕ 1683 ಹೆಕ್ಟೇರ್ ಗುರಿಗೆ 1931 ಹೆಕ್ಟೇರ್ ರಷ್ಟು ಸಾಧಿಸಲಾಗಿದೆ. ರೇಷ್ಮೆ ಇಲಾಖೆಯ ಕಚ್ಚಾ ರೇಷ್ಮೆ ಉತ್ಪಾದನೆ, ದ್ವಿತಳಿ ರೇಷ್ಮೆ ಉತ್ಪಾದನೆಯಲ್ಲಿ ಶೇ.29.54 ರಷ್ಟು ಸಾಧನೆ ಮಾಡಲಾಗಿದೆ. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವಾರ್ಷಿಕ ಗುರಿಗೆ ಅಕ್ಟೋಬರ್ ಅಂತ್ಯಕ್ಕೆ ಶೇ.100.52 ರಷ್ಟು ಸಾಧನೆ ಮಾಡಲಾಗಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ಸಭೆಗೆ ತಿಳಿಸಿದರು.
ಸಭೆಯಲ್ಲಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷ ಬಸವರಾಜ ಖೋತ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಸರಸ್ವತಿ ಮೇಟಿ, ಜಿ. ಪಂ ಸಿಇಓ ಟಿ. ಭೂಬಾಲನ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.