ಬಾಗಲಕೋಟೆ: ಜಿಲ್ಲೆ ಐತಿಹಾಸಿಕ ಸ್ಮಾರಕ ಹಾಗೂ ಪ್ರವಾಸಿ ತಾಣಗಳಿಗೆ ಪ್ರಖ್ಯಾತಿ ಪಡೆದುಕೊಂಡಿದೆ. ಸರ್ಕಾರ ಕೋವಿಡ್ ಅನ್ಲಾಕ್ ಘೋಷಣೆ ಮಾಡಿದ್ದರಿಂದ ಇಲ್ಲಿನ ಎಲ್ಲಾ ಪ್ರವಾಸಿತಾಣಗಳು ತೆರೆದಿವೆ. ಆದರೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರಿಲ್ಲದೆ ಖಾಲಿ ಹೊಡೆಯುತ್ತಿವೆ.
ಪ್ರವಾಸಿಗರಿಲ್ಲದೆ ಖಾಲಿ ಹೊಡೆಯುತ್ತಿವೆ ಬಾಗಲಕೋಟೆಯ ಐತಿಹಾಸಿಕ ಸ್ಥಳಗಳು
ಸರ್ಕಾರ ಮೂರನೇ ಹಂತದ ಅನ್ಲಾಕ್ ಘೋಷಣೆ ಮಾಡಿ ಎಲ್ಲದಕ್ಕೂ ಅವಕಾಶ ಮಾಡಿಕೊಟ್ಟಿದೆ. ಆದರೆ ಕೊರೊನಾ ಭಯದಿಂದಾಗಿ ಜನರು ಮನೆ ಬಿಟ್ಟು ಹೊರಬರಲು ಹಿಂದೇಟು ಹಾಕುತ್ತಿದ್ದು, ಜಿಲ್ಲೆಯ ಪ್ರವಾಸಿತಾಣಗಳು ಬಿಕೋ ಎನ್ನುತ್ತಿವೆ.
ಚಾಲುಕ್ಯರ ನಾಡು ಐತಿಹಾಸಿಕ ಬಾದಾಮಿಯ ಗುಹಾಂತರ ದೇಗುಲಗಳ ವೀಕ್ಷಣೆಗೆ ವೀಕೆಂಡ್ ಇದ್ದರೂ ಕೊರೊನಾ ಭಯದಿಂದ ಪ್ರವಾಸಿಗರು ಆಗಮಿಸಲು ಹಿಂದೇಟು ಹಾಕುತ್ತಿದ್ದಾರೆ. ಸದ್ಯ ಪ್ರತಿನಿತ್ಯ 200 ರಿಂದ 300ರಷ್ಟು ಪ್ರವಾಸಿಗರು ಆಗಮನವಾಗುತ್ತಿದೆ. ಕೊರೊನಾ ಇಲ್ಲದ ಸಮಯದಲ್ಲಿ ಪ್ರತಿದಿನ ದೇಶ-ವಿದೇಶಗಳಿಂದ ಒಂದು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ವೀಕ್ಷಣೆಗೆ ಆಗಮಿಸುತ್ತಿದ್ದರು.
ಜಿಲ್ಲೆಯಲ್ಲಿ ಐತಿಹಾಸಿಕ ಬಾದಾಮಿ, ಐಹೊಳೆ, ಪಟ್ಟದಕಲ್ಲುಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಪ್ರವಾಸಿಗರ ಸಂಖ್ಯೆ ಇಲ್ಲದೆ ಮಾರ್ಗದರ್ಶಿಗಳು, ಸ್ಥಳೀಯ ಸಣ್ಣಪುಟ್ಟ ವ್ಯಾಪಾರಸ್ಥರು ಜೀವನ ಸಾಗಿಸುವುದು ಕಷ್ಟಕರವಾಗುತ್ತಿದೆ.