ಬಾಗಲಕೋಟೆ : ಈ ಬಾರಿ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ. 31 ರಷ್ಟು ಹೆಚ್ಚು ಮಳೆಯಾಗಿದೆ. ಇದರಿಂದ ಮೂರು ನದಿಗಳ ಪ್ರವಾಹಕ್ಕೆ 218 ಗ್ರಾಮಗಳಲ್ಲಿ ನಷ್ಟ ಉಂಟಾಗಿದೆ. ಒಟ್ಟು 270 ಕುಟುಂಬಗಳನ್ನು ಜಿಲ್ಲಾಡಳಿತ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿದೆ, 270 ಕುಟುಂಬಗಳಿಗೆ ತಲಾ ಹತ್ತು ಸಾವಿರ ಪರಿಹಾರ ಧನ ನೀಡಲಾಗಿದೆ.
ಪ್ರವಾಹ ಹಾಗೂ ಮಳೆಯಿಂದಾಗಿ 22,473 ಹೆಕ್ಟೇರ್ ಕೃಷಿ ಬೆಳೆ,12,388 ಹೆಕ್ಟೇರ್ ತೋಟಗಾರಿಕೆ ಬೆಳೆ, 8.4 ಹೆಕ್ಟೇರ್ ರೇಷ್ಮೆ ಬೆಳೆ ಸೇರಿ ಒಟ್ಟು 34,869.40 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಪ್ರವಾಹದಿಂದ 105 ಮನೆಗಳು ಪೂರ್ಣ ಪ್ರಮಾಣದಲ್ಲಿ, 26 ಮನೆಗಳು ತೀವ್ರ ಪ್ರಮಾಣದಲ್ಲಿ ಮತ್ತು 338 ಮನೆಗಳು ಭಾಗಶಃ ಸೇರಿ ಒಟ್ಟು 469 ಮನೆಗಳಿಗೆ ಹಾನಿಯಾಗಿದೆ. ಒಟ್ಟು 999.63 ಕಿ.ಮೀ ಗ್ರಾಮೀಣ ರಸ್ತೆಗಳು ಹಾಳಾಗಿದ್ದು, ಅಂದಾಜು 245 ಕೋಟಿ ನಷ್ಟ ಉಂಟಾಗಿದೆ. ಗ್ರಾಮೀಣ ಕುಡಿಯುವ ನೀರಿನ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಒಟ್ಟು 91.03 ಕೋಟಿ ರೂ. ಹಾನಿ ಉಂಟಾಗಿದೆ. ಒಟ್ಟು 32 ಗ್ರಾಮೀಣ ಸೇತುವೆಗಳು ಹಾನಿಯಾಗಿದ್ದು, 13.3 ಕೋಟಿ ರೂ. ನಷ್ಟ ಉಂಟಾಗಿದೆ. ಒಟ್ಟು 94.00 ಕಿ.ಮೀ ಲೋಕೋಪಯೋಗಿ ಇಲಾಖೆಯ ರಾಜ್ಯ ಹೆದ್ದಾರಿ, 308.00 ಕಿ.ಮೀ ಜಿಲ್ಲಾ ಮುಖ್ಯ ರಸ್ತೆ ಹಾಗೂ 54 ಸೇತುವೆಗಳಿಗೆ ಹಾನಿಯಾಗಿದೆ, ಇದರಿಂದ 37 ಕೋಟಿ ನಷ್ಟವಾಗಿದೆ.