ಕರ್ನಾಟಕ

karnataka

ETV Bharat / state

ಬಾಗಲಕೋಟೆ:ಅತಂತ್ರದಲ್ಲಿ ಸಿಲುಕಿದ ನಾಟಕ ಕಲಾವಿದರ ಬದುಕು - ಸಮಸ್ಯೆಯಲ್ಲಿ ನಾಟಕ ಕಲಾವಿದರು

ಬಾದಾಮಿ ತಾಲೂಕಿನ ಹಂಸನೂರು ಗ್ರಾಮದಲ್ಲಿ ವಂಶ ಪಾರಂಪರ್ಯವಾಗಿ ಮಹಿಳಾ ಕಲಾವಿದರು ಬೆಳೆದುಕೊಂಡು‌ ಬಂದಿದ್ದಾರೆ. ಆದರೆ, ಕಳೆದ ಎಂಟು ತಿಂಗಳಿನಿಂದಲೂ ಕೊರೊನಾ ಭೀತಿಯಿಂದ ಜಾತ್ರೆ, ಉತ್ಸವ ನಾಟಕ‌ ನಡೆಯದ ಹಿನ್ನೆಲೆ, ಒಪ್ಪತ್ತಿನ ಊಟಕ್ಕೂ ನಾಟಕ ಕಲಾವಿದರು ಪರದಾಡುವಂತಾಗಿದೆ.

drama artist
ನಾಟಕ ಕಲಾವಿದರು

By

Published : Dec 17, 2020, 7:19 PM IST

ಬಾಗಲಕೋಟೆ: ಬಾದಾಮಿ ತಾಲೂಕಿನ ಹಂಸನೂರು ಗ್ರಾಮ ಅಂದ್ರೆ ಹವ್ಯಾಸಿ ನಾಟಕ ಮಾಡುವ ಮಹಿಳಾ ಕಲಾವಿದರ ತವರೂರು ಎಂಬ ಹೆಗ್ಗಳಿಕೆ ಇದೆ. ನಾಟಕದಿಂದ ಬಂದ ಹಣದಿಂದಲೇ ಇಲ್ಲಿನ ಮಹಿಳಾ ಕಲಾವಿದರ ಜೀವನ ಸಾಗುತ್ತಿರುವುದು. ಆದರೆ, ಕೊರೊನಾ ‌ಭೀತಿಯಿಂದ‌‌ ಹವ್ಯಾಸ ನಾಟಕ ಬಂದ್​ ಆಗಿ ಈ ಕಲಾವಿದರು ಒಪ್ಪತ್ತಿನ ಊಟಕ್ಕೂ ಪರದಾಡುವಂತಾಗಿದೆ.

ಹೌದು, ಬಾದಾಮಿ ತಾಲೂಕಿನ ಹಂಸನೂರು ಗ್ರಾಮದಲ್ಲಿ ವಂಶ ಪಾರಂಪರ್ಯವಾಗಿ ಮಹಿಳಾ ಕಲಾವಿದರು ಬೆಳೆದುಕೊಂಡು‌ ಬಂದಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಜಾತ್ರೆ, ಉತ್ಸವ, ಹಬ್ಬ ಹರಿದಿನಗಳಲ್ಲಿ ನಡೆಯುವ ಸಮಯದಲ್ಲಿ ಸ್ಥಳೀಯ ಯುವಕ ಸಂಘಟನೆಯವರು ನಾಟಕ ಪ್ರದರ್ಶನ ಹಮ್ಮಿಕೊಂಡಿರುತ್ತಾರೆ. ಈ ಸಮಯದಲ್ಲಿ ಮಹಿಳಾ ಕಲಾವಿದರನ್ನಾಗಿ ಆಯ್ಕೆ ಮಾಡಲು, ಈ ಗ್ರಾಮಕ್ಕೆ ಬಂದು ಕಲಾವಿದರನ್ನು ‌ಆಯ್ಕೆ ಮಾಡಿಕೊಂಡು‌, ಪ್ರದರ್ಶನ ಮಾಡುತ್ತಾರೆ.

ರಾತ್ರಿಯಿಂದ‌ ಬೆಳಗಿನ ಜಾವ ನಡೆಯುವ ಗ್ರಾಮೀಣ ನಾಟಕದ ನಂತರ ವೇತನ ನೀಡಿ ಕಳಿಸುತ್ತಾರೆ. ಅದೇ ಹಣದಿಂದಲೇ ಇವರು ಜೀವನ ‌ನಡೆಯುತ್ತದೆ. ಆದರೆ, ಕಳೆದ ಎಂಟು ತಿಂಗಳಿಂದಲೂ ಕೊರೊನಾ ಭೀತಿಯಿಂದ ಜಾತ್ರೆ, ಉತ್ಸವ ನಾಟಕ‌ ನಡೆಯದೆ ಹಿನ್ನಲೆ, ಒಪ್ಪತ್ತಿನ ಊಟಕ್ಕೂ ಇವರು‌ ಪರದಾಡುವಂತಾಗಿದೆ.

ಅತಂತ್ರದಲ್ಲಿ ಸಿಲುಕಿದ ನಾಟಕ ಕಲಾವಿದರ ಬದುಕು

ಬಾದಾಮಿ ಚಾಲುಕ್ಯರ ಆಡಳಿತದಲ್ಲಿಯೂ ಈ ಗ್ರಾಮದ ಮಹಿಳೆಯರು ನರ್ತಕಿಯರಾಗಿ ಸೇವೆ ಸಲ್ಲಿಸಿ, ಜೀವನ ಸಾಗಿಸುತ್ತಿದ್ದರು. ಹೀಗೆ ಇತಿಹಾಸ ಹಿನ್ನೆಲೆ ಹೊಂದಿರುವ ಈ ಕಲಾವಿದರು ಆಂಧ್ರ ಪ್ರದೇಶದದಿಂದ ವಲಸೆ ಬಂದಿರುವ ಬಗ್ಗೆ ಮಾಹಿತಿ ಇದೆ. ಈಗ ಹವ್ಯಾಸಿ ಕಲಾವಿದರಾಗಿ‌ ಜೀವನ ಸಾಗಿಸುತ್ತಾ, ತಮ್ಮ ಮಕ್ಕಳು ಸಾಕಿ ಸಲಹುತ್ತಿದ್ದಾರೆ. ಆದರೀಗ ಕೊರೊನಾ ‌ಹಿನ್ನೆಲೆ ಸರ್ಕಾರ ಜಾತ್ರೆ, ಉತ್ಸವ ಹಾಗೂ ನಾಟಕ ಪ್ರದರ್ಶನ‌ ನಿಷೇಧ ಮಾಡಿರುವುದರಿಂದ ಇವರ ಮೇಲೆ ತುಂಬಾ ಪರಿಣಾಮ ಬೀರಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ‌ಸಿದ್ದರಾಮಯ್ಯ ಕ್ಷೇತ್ರದ ವ್ಯಾಪ್ತಿಯಲ್ಲಿ ಹಂಸನೂರು ಗ್ರಾಮ ಬರಲಿದೆ. ಆದರೆ, ಈ ಕಲಾವಿದರಿಗೆ ಸರ್ಕಾರ ದಿಂದ ಸಿಗುವ ನಿವೇಶನ ಆಗಲಿ, ಇತರ ಸೌಲಭ್ಯಗಳನ್ನು ಧಕ್ಕಿಲ್ಲ. ಆದರೂ ಸಹ ಜೀವನಕ್ಕೆ ನಾಟಕ ಮಾಡುತ್ತಾ ಇರುವ ಈ‌ ಕಲಾವಿದರಿಗೆ ಕಾರ್ಯಕ್ರಮ ನಡೆಸಲು ಅನುಮತಿ ನೀಡಬೇಕೆಂದು ಒತ್ತಾಯಿಸಿದ್ದಾರೆ.

ರಾಜಕೀಯ ಸಮಾವೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿಸುತ್ತಾರೆ. ಇಂತಹ ಸಮಯದಲ್ಲಿ ಕೊರೊನಾ ಭಯ ಇರಲ್ಲ. ಆದರೆ, ನಾಟಕ ಮಾಡಲು ಕೊರೊನಾ ನೆಪ ಒಡ್ಡಿ ಅನುಮತಿ ನೀಡದೇ ಇರುವುದು ಎಷ್ಟು ಸರಿ ಎಂದು ಕಲಾವಿದರು ಪ್ರಶ್ನಿಸಿದ್ದಾರೆ. ಇನ್ನು ಮುಂದೆ ಗ್ರಾಮೀಣ ಪ್ರದೇಶದಲ್ಲಿ ನಾಟಕ ಮಾಡಲು ಅನುಮತಿ ನೀಡಬೇಕು ಇಲ್ಲವಾದಲ್ಲಿ ಹೋರಾಟ ಮಾಡುವುದಾಗಿ ಕಲಾವಿದರು ಎಚ್ಚರಿಸಿದ್ದಾರೆ.

ರಾಜ್ಯದ ವಿವಿಧ ಪ್ರದೇಶದಲ್ಲಿ ಕಲಾವಿದರಿಗೆ ನಿವೇಶನ ನೀಡಲಾಗಿದೆ. ಆದರೆ, ಬಾಗಲಕೋಟೆ ಜಿಲ್ಲೆಯಲ್ಲಿ ಮಾತ್ರ ಕಲಾವಿದರ ಸಮಸ್ಯೆಗಳಿಗೆ ಸರಿಯಾದ ಸ್ಪಂದನೆ‌ ಸಿಕ್ಕಿಲ್ಲ. ಇವರಿಗೆ ಸರ್ಕಾರದ ಸೌಲಭ್ಯಕ್ಕಿಂತ ನಾಟಕ ಪ್ರದರ್ಶನಕ್ಕೆ ಅನುಮತಿ‌ ನೀಡಿ, ಜೀವನಕ್ಕೆ ದಾರಿ ಮಾಡಿ ಎಂದು ವಿನಂತಿ ಮಾಡಿಕೊಂಡಿದ್ದಾರೆ. ಸರ್ಕಾರ ಸರಿಯಾಗಿ ಸ್ಪಂದನೆ ಮಾಡದಿದಲ್ಲಿ, ಕೊರೊನಾ ಬಂದು‌ ಸಾಯುವುದಿಲ್ಲ, ಹೊಟ್ಟೆಗೆ ಹಿಟ್ಟು ಸಿಗದೇ ಸಾಯುವ ಸ್ಥಿತಿ‌ ಬರಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details