ಬಾಗಲಕೋಟೆ: ಸಾಮಾನ್ಯವಾಗಿ ಮಕ್ಕಳು ಮೊಬೈಲ್ ನೋಡಿ ಹಾಳಾಗ್ತಾರೆ, ಓದಿನಿಂದ ದೂರ ಉಳೀತಾರೆ ಅನ್ನೋ ಮಾತನ್ನು ನಾವು ಕೇಳ್ತೀವಿ. ಆದ್ರೆ ಇಲ್ಲೊಬ್ಬ ಬಾಲಕ ಮೊಬೈಲ್ನಲ್ಲೇ ಜಗತ್ತಿನ ವಿಷಯ ಸಂಗ್ರಹಿಸುತ್ತಾ ಅಗಾಧ ಪಾಂಡಿತ್ಯ ಸಂಪಾದಿಸಿದ್ದಾನೆ.
ಕರ್ಣಂ ವೆಂಕಟ ರಾಘವೇಂದ್ರ ಪ್ರಸಾದ್, ನಗರದ ಇಂಜಿನಿಯರಿಂಗ್ ಕಾಲೇಜ್ನ ಉಪನ್ಯಾಸಕ ರಾಮ್ ಪ್ರಸಾದ್ ಎಂಬವರ ಪುತ್ರ. ಈತನಿಗೆ 7 ವರ್ಷ 10 ತಿಂಗಳು ವಯಸ್ಸು. ಆದ್ರೆ 4ನೇ ವಯಸ್ಸಿನಲ್ಲಿಯೇ ವಿಶೇಷ ಜ್ಞಾನ ಹೊಂದಿದ್ದಾನೆ.
ಈ ಬಾಲಕ ಮೊಬೈಲ್‌ನಿಂದಲೇ ಖಗೋಳ, ಭೂಗೋಳ, ವಿಜ್ಞಾನ ಹಾಗು ಗಣಿತ ಸೇರಿದಂತೆ ಎಲ್ಲ ವಿಧಧ ವಿಷಯಗಳ ಬಗ್ಗೆ ತಾನು ಸಂಗ್ರಹಿಸಿದ ಜ್ಞಾನವನ್ನು ಸರಾಗವಾಗಿ ವಿವರಿಸಿ ಹೇಳಬಲ್ಲ. ಹೀಗೆ ಹೇಳಿದ, ಕೇಳಿದ ವಿಷಯಗಳು ತಂದೆಗೂ ಸಹ ತಿಳಿಯದೇ ಹೋದಾಗ ಅವರು ಸಂಬಂಧಪಟ್ಟ ಉಪನ್ಯಾಸಕರ ಬಳಿ ಬಾಲಕನನ್ನು ಕರೆದೊಯ್ದು ವಿವರಿಸಿ ಹೇಳಿಕೊಡುತ್ತಿದ್ದಾರೆ.
ಕೋವಿಡ್ ಸಮಯದಲ್ಲೂ ಮನೆಯಲ್ಲಿದ್ದೇ ಅನೇಕ ವಿಷಯಗಳನ್ನು ಬಾಲಕನಿಗೆ ತಂದೆ ಹೇಳಿದ್ದಾರೆ. ಇವುಗಳ ಮಧ್ಯೆ ಮನೆಯಲ್ಲಿರುವ ಯಾವುದೇ ನಿರುಪಯುಕ್ತ ವಸ್ತುಗಳು ಸಿಕ್ಕರೂ ಸಹ ಅವುಗಳ ಮೂಲಕ ಸೌರವ್ಯೂಹ, ಸೋಲಾರ್ ಸೇರಿದಂತೆ ತನಗೆ ಬೇಕಾದ ರೀತಿಯಲ್ಲಿ ಜೋಡಿಸಿ ಇತರರಿಗೂ ತಿಳಿ ಹೇಳುವ ಈತನ ಪಾಂಡಿತ್ಯ ಕುತೂಹಲ ಮೂಡಿಸುತ್ತದೆ. ಪದವಿ ಪೂರ್ವ, ಪದವಿ ಹಂತದ ವಿಷಯಗಳನ್ನೂ ಸಹ ಅತ್ಯಂತ ಸುಲಲಿತವಾಗಿ ಹೇಳುವ ವೆಂಕಟ ರಾಘವೇಂದ್ರ ಸಂಸ್ಕೃತವನ್ನೂ ಕಲಿತಿದ್ದಾನೆ.
ಸಣ್ಣ ವಯಸ್ಸಿನಲ್ಲಿಯೇ ಬಾಲಕ ಪ್ರತಿಭೆ ಅರಿತಿರುವ ತಂದೆ ರಾಮ್ ಪ್ರಸಾದ್ ಈಗಾಗಲೇ ಈತನ ಬಗ್ಗೆ ನಾಸಾಗೆ ಮಾಹಿತಿ ನೀಡಿದ್ದಾರೆ. ವಿಜ್ಞಾನಿಯಾಗಬೇಕೆಂಬ ಆಶಯ ಹೊತ್ತ ಮಗನ ಗುರಿಗೆ ಪೋಷಕರು ಪ್ರೇರೇಪಿಸುತ್ತಿದ್ದಾರೆ.