ಬಾಗಲಕೋಟೆ: ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದವನು. ಬರುವ ದಿನಗಳಲ್ಲಿ ಯಾವುದೇ ಸ್ಥಾನಮಾನವನ್ನು ಅಪೇಕ್ಷಿಸದೇ, ರಾಜ್ಯದ ಉದ್ದಗಲಕ್ಕೂ ಪಕ್ಷವನ್ನು ಬಲಪಡಿಸಲು ಓಡಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ(Former CM B S Yediyurappa) ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರವೂ ರಾಜ್ಯದ ಜನರು ನನ್ನ ಮೇಲೆ ಅಷ್ಟೇ ಪ್ರೀತಿ, ವಿಶ್ವಾಸ ಇಟ್ಟಿದ್ದಾರೆ. ದಾರಿಯಲ್ಲಿ ಹೋಗುವ ಸಾಮಾನ್ಯ ಹೆಣ್ಣುಮಗಳು ಸಹ ನಮ್ಮ ಯಡಿಯೂರಪ್ಪ ಅಂತ ಹೇಳ್ತಾರೆ. ಅದಕ್ಕೆ ಯಾವುದೇ ಬೆಲೆ ಕಟ್ಟಲು ಸಾಧ್ಯವಿಲ್ಲ. ನನಗೆ ಯಾವುದೇ ಸ್ಥಾನಮಾನದ ಅಗತ್ಯತೆ ಇಲ್ಲ ಎಂದರು.
ಮುಂದಿನ ಚುನಾವಣೆಯಲ್ಲಿ ಬಿಎಸ್ವೈ?
ಮುಂದಿನ ಚುನಾವಣೆಯಲ್ಲಿ ತಾವು ಅಖಾಡದಲ್ಲಿ ಇರುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮುಂದಿನ ಬಾರಿ ಚುನಾವಣೆಗೆ ನಾನು ನಿಲ್ಲಬೇಕೋ, ಬೇಡವೋ ಎನ್ನೋದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ, ನಾನಲ್ಲ ಎಂದು ಹೇಳಿದರು.
ಬಿಜೆಪಿಗೆ ಬಿಎಸ್ವೈ ಅನಿವಾರ್ಯವೇ?
ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯವೇ ಎಂಬ ಪ್ರಶ್ನೆಗೆ, ನಾನೆಲ್ಲಿ ಹೋಗಿದ್ದೇನೆ? ಪಕ್ಷವನ್ನು ಕಟ್ಟುವ ಸಲುವಾಗಿ ರಾಜ್ಯಾದ್ಯಂತ ಓಡಾಡಿ ಕೆಲಸ ಮಾಡುತ್ತಿದ್ದೇನೆ. ಆ ಬಗ್ಗೆ ಎರಡು ಮಾತಿಲ್ಲ. ಅನಿವಾರ್ಯ ಎನ್ನುವ ಮಾತಿಲ್ಲ. ಸಾಮೂಹಿಕ ನೇತೃತ್ವದಲ್ಲಿ ನಾನು ಕೂಡಾ ಓಡಾಡಿ ಕೆಲಸ ಮಾಡುತ್ತೇನೆ. ನಾನು ಮನೆಗೆ ಹೋಗುವ ಪ್ರಶ್ನೆಯೇ ಇಲ್ಲ. ಮುಂದಿನ ಎಲೆಕ್ಷನ್ನಲ್ಲಿ 140ಕ್ಕೂ ಅಧಿಕ ಸ್ಥಾನ ಗೆಲ್ಲೋದು, ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರೋದು ನಮ್ಮ ಸ್ಪಷ್ಟ ಸಂಕಲ್ಪ. ಆ ದಿಕ್ಕಿನಲ್ಲಿ ಈ ಚುನಾವಣೆ ಮುಗಿದ ಬಳಿಕ ಮತ್ತೆ ಪ್ರವಾಸ ಕೈಗೊಳ್ಳುತ್ತೇನೆ ಎಂದು ಬಿಎಸ್ವೈ ತಿಳಿಸಿದರು.
ಪ್ರಧಾನಿಗೆ ಅಭಿನಂದನೆ:
ಯಾವುದೇ ಒಣ ಪ್ರತಿಷ್ಟೆಗೆ ಒಳಗಾಗದೇ ಮೋದಿಯವ್ರು ಕೃಷಿ ಕಾಯ್ದೆಗಳನ್ನು ವಾಪಸ್(repeal of 3 farm laws) ಪಡೆದಿದ್ದಾರೆ. ಸ್ವಲ್ಪ ತಡವಾದ್ರೂ ಸಹ ಈ ದೃಢ ನಿರ್ಧಾರ ರೈತ ಸಮೂಹಕ್ಕೆ ನೀಡುತ್ತಿರೋ ಒಂದು ಕೊಡುಗೆಯಾಗಿದೆ. ಇದರಿಂದ ರೈತ ಸಮೂಹಕ್ಕೆ ಒಳ್ಳೆಯದಾಗುತ್ತದೆ ಎಂಬುದು ಪ್ರಧಾನಿಯ ಭಾವನೆಎಂದು ಹೇಳುತ್ತಾ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದರು.