ಬಾಗಲಕೋಟೆ :ಮಲಪ್ರಭಾ ನದಿಯ ಒತ್ತುವರಿ ತೆರವುಗೊಳಿಸುವಂತೆ ಈಗ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ. ಸರ್ಕಾರ ನಡೆಸುವವರೇ ಮೊದಲು ಈ ಬಗ್ಗೆ ಪತ್ರ ವ್ಯವಹಾರ ಮಾಡಿ, ಚಾಲನೆ ನೀಡಿರುವುದು ಸ್ವಾಗತಾರ್ಹ. ಆದರೆ ಇದು ಜನಪ್ರತಿನಿಧಿಗಳ ಉತ್ಸಾಹ, ಜನರ ಹುಮ್ಮಸ್ಸು ಹಾಗೂ ರೈತರು ಮನಸ್ಸು ಮಾಡಿದರೆ ಮಾತ್ರ ಸಾಧ್ಯ ಇಂತಹ ಕಾರ್ಯ ಈಗ ನಡೆಯುವುದು ಅಗತ್ಯವಿದೆ. ಕೇವಲ ಕಾಗದಪತ್ರ, ಹೇಳಿಕೆಯಿಂದ ಸಾಧ್ಯವಿಲ್ಲ. ಈಗಾಗಲೇ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹಾಗೂ ನೀರಾವರಿ ಸಚಿವರಾದ ರಮೇಶ ಜಾರಕಿಹೊಳಿ ಅವರು ಸಹ ಮಲಪ್ರಭಾ ನದಿ ಒತ್ತುವರಿ ತೆರವುಗೊಳಿಸುವ ಬಗ್ಗೆ ಗಮನ ಹರಿಸಿದ್ದಾರೆ.
ಮಲಪ್ರಭಾ ನದಿಯ ಒತ್ತುವರಿ ತೆರವು ಗೊಳಿಸುವಂತೆ ಜಾಗೃತಿ ಸ್ವಾಗತಾರ್ಹ ಮಲಪ್ರಭೆಗೆ 40 ವರ್ಷಗಳ ಹಿಂದಿನ ವೈಭವ ಮರಳಬೇಕಿದೆ. ಜೀವನದಿಗಾಗಿ ಮಿಡಿದ ಮನಸ್ಸುಗಳು ಮತ್ತೆ ಒಂದಾಗಿ ಹೋರಾಡಬೇಕಿದೆ. ಬೆಳಗಾವಿ, ಬಾಗಲಕೋಟೆ, ಗದಗ ಜಿಲ್ಲೆಗಳ ನದಿ ತೀರದ ಫಲಾನುಭವಿಗಳು ಒಗ್ಗೂಡಿ ಜಾಗೃತಿ ಮೂಡಿಸುವ ಜೊತೆಗೆ ಮುಂದಿನ ಪೀಳಿಗೆಗೆ ಅನುಕೂಲ ಹಾಗೂ ಅನಾನುಕೂಲಗಳ ಬಗ್ಗೆ ತಿಳಿ ಹೇಳಿ ತೆರವುಗೊಳಿಸುವ ಕಾರ್ಯ ನಡೆಯಬೇಕಾಗಿದೆ.
ಬೆಳಗಾವಿ ಜಿಲ್ಲೆಯ ಖಾನಾಪುರದ ಕಣಕುಂಬಿಯಲ್ಲಿ ಜನಿಸಿ ಸವದತ್ತಿ ತಾಲೂಕಿನ ಮುನವಳ್ಳಿ ಬಳಿಯ ನವಿಲುತೀರ್ಥ ಜಲಾಶಯದವರೆಗೆ 185 ಕಿ.ಮೀ. ಹಾಗೂ ಅಲ್ಲಿಂದ ಬಾಗಲಕೋಟೆ ಜಿಲ್ಲೆಯ ಪ್ರಸಿದ್ಧ ಕ್ಷೇತ್ರವಾದ ಕೂಡಲ ಸಂಗಮದವರೆಗಿನ 180 ಕಿ.ಮೀ.ಉದ್ದದಷ್ಟು ಹರಿದಿರುವ ಜೀವನದಿ ಮಲಪ್ರಭೆಯ ವೈಭವವನ್ನು ನೆನೆಸಿಕೊಂಡರೆ ರೋಮಾಂಚನವಾಗಿದೆ.
1980 ರ ನಂತರ ಕ್ರಮೇಣ ಮರಳಿನ ಲೂಟಿ, ಸ್ಥಳೀಯ ಸಂಸ್ಥೆಗಳ ನಿರ್ಲಕ್ಷ, ರಾಜಕೀಯ ನಾಯಕರ ದುರಾಸೆಯ ಫಲವಾಗಿ ನದಿಯು ಚರಂಡಿ ಸ್ವರೂಪಕ್ಕೆ ತಿರುಗಿತು. ನಾಗರಿಕ ವೇದಿಕೆಯ ಅಧ್ಯಕ್ಷ ಮಾರುತಿ ಚಂದರಗಿ ಹಾಗೂ ಅವರ ಗೆಳೆಯರಿಂದ ಹೋರಾಟದ ಹಾದಿ. ಇದೆಲ್ಲ ಈಗ ಇತಿಹಾಸ. 150 ಮೀಟರ್ ಅಗಲದಷ್ಟಿದ್ದ ನದಿಯ ಎರಡೂ ಬದಿಗಿನ ಹೊಲಗದ್ದೆಗಳ ಮಾಲಿಕರು ನದಿಯ ಮಧ್ಯದವರೆಗೂ ಬಂದು ನಿಂತರು.
ತಮಗೆ ಬೇಕಾದ ಬೆಳೆ ಬೆಳೆದುಕೊಳ್ಳುತ್ತಲೇ ನಡೆದರು. ಅತಿಕ್ರಮಣ ತೆರವು ಕಾರ್ಯಾಚರಣೆಗಾಗಿ "ಕಾಡಾ" ದಿಂದ ಮಂಜೂರಾದ ಹಣವೂ ಪೋಲಾಗಿ ಹೋಯಿತು. ನಾಗರಿಕರ ಧ್ವನಿ ಅರಣ್ಯ ರೋದನವಾಯಿತು. 2003 ರಲ್ಲಿ ರಾಮದುರ್ಗದ ಡಾ.ಪೂರ್ಣಿಮಾ ಗೌರೋಜಿ ಅವರು ಕಾನೂನು ಹೋರಾಟಕ್ಕೆ ಇಳಿದರು.17 ವರ್ಷಗಳಿಂದಲೂ ಈ ಹೋರಾಟ ನಡೆಸಿಯೇ ಇದ್ದಾರೆ. ಹೈಕೋರ್ಟು, ಲೋಕಾಯುಕ್ತ ಎಲ್ಲವೂ ಅತಿಕ್ರಮಣ ತೆರವು ಮತ್ತು ಶುದ್ಧ ಕುಡಿಯುವ ನೀರಿನ ಪರವಾಗಿಯೇ ನಿಂತವು. ಆದರೂ ಆಗಬೇಕಾದ ಕೆಲಸ ಆಗುತ್ತಿಲ್ಲ.
ಕಳೆದ ಆಗಸ್ಟ್ 23 ರಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಜಲಸಂಪನ್ಮೂಲ ಖಾತೆ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಬರೆದ ಪತ್ರವೊಂದು ಮಲಪ್ರಭೆಯ "ಜೀರ್ಣೊದ್ಧಾರಕ್ಕೆ" ಮುನ್ನುಡಿ ಬರೆಯಿತೆನ್ನಬಹುದು.
ಪ್ರವಾಹ ವೀಕ್ಷಣೆಗೆ ಬೆಳಗಾವಿ, ವಿಜಯಪುರ ಜಿಲ್ಲೆಗಳಿಗೆ ಆಗಮಿಸಿದ್ದ ಮುಖ್ಯಮಂತ್ರಿಗಳ ಗಮನಕ್ಕೂ ಈ ವಿಷಯವು ಬಂತು, ಚರ್ಚೆಯೂ ಆಯಿತು.
ಕಳಸಾ ಬಂಡೂರಿ ತಿರುವು ಯೋಜನೆಯ ಅನುಷ್ಠಾನದಿಂದ ಮಲಪ್ರಭೆಗೆ ಸೇರುವ ನೀರನ್ನು ಅನಿವಾರ್ಯವಾಗಿ ನವಿಲುತೀರ್ಥದಿಂದ ಬಿಡುಗಡೆ ಮಾಡಿದಾಗ ಪ್ರವಾಹ ಉಂಟಾಗಿ, ಮಲಪ್ರಭಾ ನದಿಯ ತೀರದ ಜನತೆಗೆ ತೊಂದರೆ ಆಗಲಿದೆ. ಯೋಜನೆ ಅನುಷ್ಠಾನದ ಮೊದಲೇ ಅತಿಕ್ರಮಣ ತೆರವು ಅನಿವಾರ್ಯ ಮತ್ತು ಅವಶ್ಯ ಎಂಬುದನ್ನು ಸರ್ಕಾರ ಹಾಗೂ ರೈತರು ತಿಳಿಯಬೇಕಾಗಿದೆ.
ಸೆಪ್ಟೆಂಬರ್ 4 ರಂದು ಬೆಳಗಾವಿಯಲ್ಲಿ ಗೋವಿಂದ ಕಾರಜೋಳರಿಗೆ ಹಾಗೂ ರಮೇಶ ಜಾರಕಿಹೊಳಿಯವರಿಗೆ ಕನ್ನಡ ಕ್ರಿಯಾ ಸಂಘಟನೆ ಮುಖಂಡರಾದ ಅಶೋಕ ಚಂದರಗಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದೆ.
ಸರ್ಕಾರ ಅಕ್ಟೋಬರ್ ಅಂತ್ಯದವರೆಗೆ ಯಾವ ಕ್ರಮ ತೆಗೆದುಕೊಳ್ಳಲಿದೆ ಎಂಬುದನ್ನು ನೋಡಿ, ಮುಂದೆ ಕನ್ನಡ ಕ್ರಿಯಾ ಸಮಿತಿ ಸಂಘಟನೆ ಹಾಗೂ ನಾಗರಿಕ ವೇದಿಕೆ ಸಂಘಟನೆ ಮೂಲಕ ಮೂರು ಜಿಲ್ಲೆಯ ಜನರಿಗೆ ಜಾಗೃತಿ ಮೂಡಿಸಿ ಹೋರಾಟ ಮಾಡಲು ಸಿದ್ದತೆ ನಡೆಸಿದೆ. ಅದಕ್ಕೂ ಮುಂಚೆ ಸರ್ಕಾರದ ನಿಲವು ಏನು ಎಂಬುವುದೇ ಕುತೂಹಲ ಮೂಡಿಸಿದೆ.