ಬಾಗಲಕೋಟೆ:ಹೊಸ ಪಕ್ಷ ಕಟ್ಟಲು ಮುಂದಾಗಿರುವ ಗಾಲಿ ಜನಾರ್ದನ್ ರೆಡ್ಡಿ ಮಹಾಶಯನಿಗೆ ಹಣ ಎಲ್ಲಿಂದ ಬಂತು ಅಂತಾ ಕೇಳಿ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್ ಆರ್ ಹಿರೇಮಠ ಹೇಳಿದರು.
ಸೋಮವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದು ಪ್ರಜಾಪ್ರಭುತ್ವ ರಾಷ್ಟ್ರ ಎಲ್ಲರಿಗೂ ಹಕ್ಕಿದೆ. ಆದರೆ ಆ ಹಕ್ಕು ಸಂವಿಧಾನ ಚೌಕಟ್ಟಿನೂಳಗೆ ಇರಬೇಕು ಎಂದು ತಿಳಿಸಿದರು.
ಯಡಿಯೂರಪ್ಪ ಅವರಿಗೆ ಪ್ರತಿತಿಂಗಳು 10 ಕೋಟಿ ರೂಪಾಯಿ ಕೊಟ್ಟಿದ್ದೀವಿ ಅಂತಾ ಸಚಿವ ಶ್ರೀರಾಮುಲು ಹೇಳಿದ್ದರು. ಆ ಬಂತು ಹಣ ಎಲ್ಲಿಂದ ಬಂತು ಎಂದು ಪ್ರಶ್ನೆ ಮಾಡಿದರು. ಜನಾರ್ದನ ರೆಡ್ಡಿ ಬಳ್ಳಾರಿಗೆ ಹೋಗಬೇಕೆಂದರೆ ಸುಪ್ರೀಂ ಮುಂದೆ ಕೈಕಟ್ಟಿ ನಿಲ್ಲಬೇಕು. 40 ಸಾವಿರ ಕೋಟಿ ರೂಪಾಯಿ ಮಾಡಿದ್ದೀನಿ ಅಂತಾ ಹೇಳಿದ್ದಾರೆ. ಆ ಹಣವನ್ನು ಹೇಗೆ ಮಾಡಿದ್ದಾನೆ? ಬೆಲೆಕೇರೆ ಪೋರ್ಟ್‌ನಿಂದ 55 ಲಕ್ಷ ಮೆಟ್ರಿಕ್ ಟನ್ ಅದಿರು ರಫ್ತಾಗಿದೆ. ಅದರಲ್ಲಿ 51 ಲಕ್ಷ ಮೆಟ್ರಿಕ್ ಟನ್ ಅದಿರು ಅಕ್ರಮವಾಗಿದೆ ಎಂದು ಹೇಳಿದರು. ಈ ಬಗ್ಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದದಲ್ಲಿ 2 ಕ್ರಿಮಿನಲ್ ಕೇಸ್ಗಳು ನಡೆಯುತ್ತಿವೆ ಎಂದು ಹಿರೇಮಠ ತಿಳಿಸಿದರು.
ಮೊಟ್ಟಮೊದಲ ಹೈದರಾಬಾದ್ ಜೈಲಿನೊಳಗೆ ರೆಡ್ಡಿ ಹೋಗಬೇಕಾಯಿತೋ, ಆ ಕೇಸ್ ಬಗ್ಗೆ ಒಮ್ಮೆಯೂ ವಿಚಾರಣೆ ಆಗಿಲ್ಲ. ಈ ಮಹಾಭೂಪ ತನ್ನ ಕುತಂತ್ರಗಾರಿಕೆ, ಕ್ರಿಮಿನಾಲಿಟಿ ಯಾವುದನ್ನು ಇನ್ನೂ ಬಿಟ್ಟಿಲ್ಲ. ಅವನ ಒಂದು ಕಿಸೆಯಲ್ಲಿ ಯಡಿಯೂರಪ್ಪ ಇದ್ದರೆ, ಇನ್ನೊಂದು ಕಿಸೆಯಲ್ಲಿ ಕಾಂಗ್ರೆಸ್ ನ ಮಾಜಿ ಮುಖ್ಯಮಂತ್ರಿ ವೈ ಎಸ್ ರಾಜಶೇಖರರೆಡ್ಡಿ ಇದ್ದ, ಈಗ ಅವರ ಮಗನೇ ಆಂಧ್ರದ ಸಿಎಂ ಆಗಿದ್ದಾನೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಅಲ್ಲದೆ, ನಮ್ಮ ಪ್ರಜಾಪ್ರಭುತ್ವವನ್ನು, ನೈಸರ್ಗಿಕ ಸಂಪನ್ಮೂಲಗಳನ್ನು, ಸಂಸ್ಕೃತಿಯ ಮೂಲ ಲಕ್ಷಣಗಳನ್ನು ಮುಂದಿನ ಪೀಳಿಗಾಗಿ ಉಳಿಸುವ ಗುರುತರ ಜವಾಬ್ದಾರಿ ನಮ್ಮ ನಿಮ್ಮ ಮೇಲಿದೆ ಎಂದು ಹಿರೇಮಠ ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರದ ಮೂರು ಕರಾಳ ಕೃಷಿ ಕಾಯ್ದೆಗಳು ರದ್ದಾಗಬೇಕು, ಕನಿಷ್ಠ ಬೆಂಬಲ ಬೆಲೆ ಹಾಗೂ ಸೆಕ್ಯೂರಮೆಂಟ್ ನೀತಿಗಳ ಕಾಯ್ದೆ ಬದ್ಧಗೊಳಿಸಬೇಕು ಎನ್ನುವುದು ಸೇರಿದಂತೆ ವಿವಿಧ ಹಕ್ಕೊತ್ತಾಯ ಮಂಡಿಸಲು ಜನಾಂದೋಲ ಮಹಾಮೈತ್ರಿ ನೇತೃತ್ವದಲ್ಲಿ ಜ.2 ರಿಂದ 11 ವರೆಗೆ ಕೂಡಲಸಂಗಮ ದಿಂದ ಬೆಂಗಳೂರು ಫ್ರೀಡಂ ಪಾರ್ಕ್ವರೆಗೆ
ಸಮಾಜ ಪರಿವರ್ತನ ಸತ್ಯಾಗ್ರಹ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಕೇಂದ್ರ ಸಚಿವ ಜೋಶಿ ಮಾನಹಾನಿ ಕೇಸ್.. ಸಾಮಾಜಿಕ ಹೋರಾಟಗಾರ ಹಿರೇಮಠಗೆ ಹಿನ್ನಡೆ