ಬಾಗಲಕೋಟೆ:ಕಾಣೆಯಾಗಿದ್ದ ಬಾಲಕಿ ಶವವಾಗಿ ಪತ್ತೆಯಾದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಬಾಲಕಿಯ ಚಿಕ್ಕಮ್ಮ ತನ್ನ ಅಕ್ರಮ ಸಂಬಂಧ ಮುಚ್ಚಿಡಲು ಪ್ರಿಯಕರನ ಜೊತೆ ಸೇರಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಮನೆಗೆ ಬಂದಿದ್ದ ಪ್ರಿಯಕರನಿಂದ ಬಾಲಕಿಯ ಕೊಲೆ ನಡೆದಿದೆ. ಕತ್ತು ಹಿಸುಕಿ ಕೊಲೆ ಮಾಡಿದ ಬಳಿಕ ಸಾಕ್ಷಿ ನಾಶ ಮಾಡಲು ಬಾಲಕಿಯ ಶವವನ್ನು ಆರೋಪಿಗಳು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಬಾವಿಗೆ ಎಸೆದಿದ್ದರು.
ಮಾ.15 ರಂದು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. 11 ವರ್ಷ ವಯಸ್ಸಿನ ರೇಖಾ ಕೊಲೆಯಾದ ಬಾಲಕಿ. ಕೊಲೆ ಜಾಡು ಹಿಡಿದು ಪೊಲೀಸರು ತನಿಖೆ ನಡೆಸಿದಾಗ ಬಾಲಕಿಯ ಚಿಕ್ಕಮ್ಮಳ ಕರಾಳ ಮುಖ ಬಯಲಾಗಿದೆ. ಶಂಕ್ರವ್ವ ಹಾಗೂ ಪ್ರಿಯಕರ ಷಣ್ಮುಖಪ್ಪ ಬಂಧಿತ ಆರೋಪಿಗಳು. ಶವ ಸಾಗಿಸಲು ಹಗ್ಗ ಹಾಗೂ ಪ್ಲಾಸ್ಟಿಕ್ ಚೀಲ ತಂದು ಕೊಟ್ಟ ಶಂಕ್ರವ್ವನ ಸಹೋದರ ಶಂಕ್ರಪ್ಪನೂ ಸಹ ಪೊಲೀಸರ ಅತಿಥಿಯಾಗಿದ್ದಾನೆ. ಮೂವರು ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಶಂಕ್ರವ್ವ ಕೊಲೆಯಾದ ಬಾಲಕಿ ತಂದೆಯ ಸಹೋದರನ ಹೆಂಡತಿ. ಶಂಕ್ರವ್ವ ತನ್ನ ಗಂಡ ಮಾನಸಿಕ ಅಸ್ವಸ್ಥನಾಗಿದ್ದ ಕಾರಣ ಎರಡು ವರ್ಷಗಳಿಂದ ವಾಹನ ಚಾಲಕ ಷಣ್ಮುಖಪ್ಪನ ಜೊತೆ ಅಕ್ರಮ ಸಂಬಂಧವನ್ನು ಹೊಂದಿದ್ದಳು. ಷಣ್ಮುಖಪ್ಪ ಆಗಾಗ ಶಂಕ್ರವ್ವಳ ಮನೆಗೆ ಬಂದು ಹೋಗುತ್ತಿದ್ದುದನ್ನು ಬಾಲಕಿ ರೇಖಾ ನೋಡಿದ್ದಳು. ತಮ್ಮ ಅನೈತಿಕ ಸಂಬಂಧದ ವಿಚಾರವನ್ನು ಬಾಲಕಿ ಬೇರೆಯವರಿಗೆ ಹೇಳಬಹುದು ಎಂದು ಹೆದರಿ ಕೊಲೆ ಮಾಡಿದ್ದಾರೆ. ಬಾಲಕಿ ಕಾಣೆಯಾದ ಬಗ್ಗೆ ದೂರು ದಾಖಲಿಸಲಾಗಿತ್ತು, ಇದೇ ಸಂದರ್ಭದಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ನಂತರ ಮಾಹಿತಿ ಪಡೆದು ತನಿಖೆ ಚುರುಕುಗೊಳಿಸಿ ಪ್ರಕರಣವನ್ನು ಭೇದಿಸಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.