ಬಾಗಲಕೋಟೆ: ಬಿಜೆಪಿ ಪಕ್ಷದ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮಖದಲ್ಲಿಯೇ ನಡೆದ ಗಲಾಟೆಯಿಂದಾಗಿ ಕೆಲ ಸಮಯ ಗೊಂದಲಮಯ ವಾತಾವರಣ ನಿರ್ಮಾಣವಾಯಿತು. ಸಭೆಯು ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಜಿಲ್ಲಾಧ್ಯಕ್ಷರಾದ ಎಸ್.ಟಿ ಪಾಟೀಲ ಮಾತನಾಡಿದರು. ಬಳಿಕ ವೇದಿಕೆ ಮುಂದೆ ಕುಳಿತುಕೊಂಡಿರುವ ರಾಜು ರೇವಣಕರ್ ಮಾತನಾಡಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿರುವವರು ಈ ಸಭೆಯಲ್ಲಿ ಆಗಮಿಸಿ ಕುಳಿತುಕೊಂಡಿದ್ದಾರೆ. ಅವರನ್ನು ಸಭೆಯಿಂದ ಹೊರಗೆ ಹಾಕಿರಿ ಎಂದು ಹೇಳಿ ಘೋಷಣೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎಲ್ಲ ಕಾರ್ಯಕರ್ತರು ಸೇರಿಕೊಂಡು, ಪಕ್ಷ ವಿರೋಧಿ ಚಟುವಟಿಕೆ ಮಾಡಿರುವವರು ಹೊರಗೆ ಹೋಗಿರಿ, ಇಲ್ಲವೇ ನಾವೇ ಹೊರಗೆ ಹಾಕಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಗೋವಿಂದ ಕಾರಜೋಳ ಅವರು ಸಮಾಧಾನ ಪಡಿಸಿದರು. ಕಾರ್ಯಕರ್ತರು ಮೌನ ವಹಿಸದೇ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಸಿದ್ದರಾಮನಹುಂಡಿಯಲ್ಲಿ ಪ್ರಚಾರದ ವೇಳೆ ಬಿಜೆಪಿ - ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಗಲಾಟೆ
ನಂತರ ಮಾಜಿ ಶಾಸಕರಾದ ವೀರಣ್ಣ ಚರಂತಿಮಠ ಮಾತನಾಡಿ, ವೈದ್ಯಕೀಯ ಪ್ರಕೋಸ್ಟ ಸಂಚಾಲಕರಾದ ಡಾ.ಶೇಖರ ಮಾನೆ, ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ. ನಿನ್ನೆ ಶಿವಾಜಿ ಪುತ್ಥಳಿ ಸ್ಥಾಪನೆ ಮಾಡುವ ವಿಷಯವಾಗಿಯೂ ಸಹ ಮಾಡಿದ್ದಾರೆ. ಇಂತಹ ವ್ಯಕ್ತಿಯನ್ನು ಸಭೆಯಿಂದ ಹೊರಗೆ ಹಾಕಿರಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಡಾ.ಮಾನೆ ವೇದಿಕೆಗೆ ಆಗಮಿಸಿ ಮುಖಂಡರಿಗೆ ಸಮಜಾಯಿಷಿ ನೀಡಲು ಮುಂದಾದಾಗ ಕಾರ್ಯಕರ್ತರು ಹಾಗೂ ಪೊಲೀಸರು ಆಗಮಿಸಿ ಡಾ.ಮಾನೆ ಅವರನ್ನು ಹೊರಗೆ ಕರೆದುಕೊಂಡು ಹೋದರು. ಇವರ ಜೊತೆಗೆ ಅವರ ಬೆಂಬಲಿಗರನ್ನು ಸಹ ಕರೆದುಕೊಂಡು ಹೋದರು. ನಂತರ ಸಭೆಯನ್ನು ಮುಂದುವರೆಸಲಾಯಿತು.