ಬಾಗಲಕೋಟೆ : ಹುನಗುಂದ ಮತಕ್ಷೇತ್ರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡುತ್ತಾ, ಕಾಂಗ್ರೆಸ್ ಪಕ್ಷವನ್ನು ಟೀಕಿಸಿ ರಾಹುಲ್ ಅವರನ್ನು 'ರಾಹುಲ್ ಬಾಬಾ' ಎಂದು ವ್ಯಂಗ್ಯವಾಡಿದರು. ಕ್ಷೇತ್ರದ ಅಭ್ಯರ್ಥಿ ದೊಡ್ಡನಗೌಡ ಪಾಟೀಲ ಪರ ಅವರು ಮತಬೇಟೆ ನಡೆಸಿದರು. ಇಲಕಲ್ಲ ಪಟ್ಟಣದ ವೀರಮಣಿ ಕ್ರೀಡಾಂಗಣದಲ್ಲಿ ಬಿಜೆಪಿ ಪ್ರಚಾರ ಸಭೆ ನಡೆಯಿತು.
2024ರಲ್ಲಿ ಮತ್ತೆ ಮೋದಿ ಅವರು ಪ್ರಧಾನ ಮಂತ್ರಿ ಆಗಬೇಕೇ? ಬೇಡವೇ?. ಹಾಗಾದರೆ, ಎಲ್ಲರೂ ಜೋರಾಗಿ ಜೈಕಾರ ಹಾಕಿ ಎಂದು ಹೇಳುತ್ತಾ ಭಾಷಣ ಆರಂಭಿಸಿದ ಶಾ, ಕೂಡಲ ಸಂಗಮನಾಥ, ಮಲ್ಲಿಕಾರ್ಜುನ, ಬಾದಾಮಿ ಬನಶಂಕರಿ, ಸಿದ್ದೇಶ್ವರ ಸ್ವಾಮೀಜಿ ಹಾಗೂ ಜಗಜ್ಯೋತಿ ಬಸವೇಶ್ವರ ಈ ನೆಲದಲ್ಲಿ ಸಾಕಷ್ಟು ಕ್ರಾಂತಿ ಮಾಡಿದ್ದಾರೆ. ಇಂತಹ ಮಹಾನ್ ವ್ಯಕ್ತಿಗಳಿಗೆ ಪ್ರಮಾಣ ಮಾಡಿ ಭಾಷಣ ಪ್ರಾರಂಭಿಸುತ್ತೇನೆ ಎಂದರು. ಮಾತು ಮುಂದುವರೆಸಿ, ಬಾಗಲಕೋಟೆ ಜಿಲ್ಲೆಯ 7 ಕ್ಷೇತ್ರದಲ್ಲಿಯೂ ಬಿಜೆಪಿ ಗೆಲುವು ಖಚಿತ ಎಂದರು.
ಲಿಂಗಾಯತ ಸಮುದಾಯದ ಬಗ್ಗೆ ಮಾತನಾಡುವ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಲಿಂಗಾಯತ ಮುಖ್ಯಮಂತ್ರಿ ಮಾಡಿ ಅಪಮಾನ ಮಾಡಿದ್ದಾರೆ. ದೇವರಾಜ ಅರಸು, ಎಸ್.ನಿಜಲಿಂಗಪ್ಪ ಅವರನ್ನು ಅಪಮಾನಿಸಿದ್ದಾರೆ. ಆದರೆ ಬಿಜೆಪಿ ಯಡಿಯೂರಪ್ಪ, ಬೊಮ್ಮಯಿಯವರನ್ನು ಮುಖ್ಯಮಂತ್ರಿ ಮಾಡಿ ಗೌರವಯುತವಾಗಿ ನಡೆಸಿಕೊಂಡಿದೆ ಎಂದು ತಿಳಿಸಿದರು.
ಪ್ರಣಾಳಿಕೆಯಲ್ಲಿ ಹೇಳಿರುವಂತೆ ವರ್ಷದಲ್ಲಿ ಮೂರು ಬಾರಿ ಉಚಿತ ಗ್ಯಾಸ್, ಆಹಾರ ಧಾನ್ಯ, ಹಾಲು ಬಡವರಿಗೆ ನೀಡುತ್ತೇವೆ. ಬಾಗಲಕೋಟೆಯಲ್ಲಿ ಹೊಸ ವಿಮಾನ ನಿಲ್ದಾಣ, ಹೊಸ ವಿಶ್ವವಿದ್ಯಾಲಯ, ಜಿಲ್ಲಾ ಸರ್ಕಾರಿ ಆಸ್ಪತ್ರೆ ಅಭಿವೃದ್ಧಿ ಮಾಡುತ್ತೇವೆ. ಹಂಪಿ, ಬಾದಾಮಿ, ಪಟ್ಟದಕಲ್ಲು, ವಿಜಯಪುರದ ಐತಿಹಾಸಿಕ ಕೇಂದ್ರಗಳ ಅಭಿವೃದ್ಧಿಯನ್ನು ಕೆಂದ್ರ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.