ಕರ್ನಾಟಕ

karnataka

ETV Bharat / state

'ಲೋಕಸಭೆಗೆ ಸ್ಪರ್ಧಿಸಲು ಅವಕಾಶ ನೀಡಬೇಕು': ಕಾಂಗ್ರೆಸ್ ಮುಖಂಡ ಅಜಯ ಕುಮಾರ ಸರನಾಯಕ - etv bharat kannada

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದೇನೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಅಜಯ ಕುಮಾರ ಸರನಾಯಕ ತಿಳಿಸಿದರು.

Etv Bharat
Etv Bharat

By ETV Bharat Karnataka Team

Published : Aug 25, 2023, 4:31 PM IST

Updated : Aug 25, 2023, 4:47 PM IST

ಬಿಡಿಸಿಸಿ ಬ್ಯಾಂಕ್​ ಅಧ್ಯಕ್ಷ ಅಜಯ ಕುಮಾರ ಸರನಾಯಕ

ಬಾಗಲಕೋಟೆ: ಚುನಾವಣಾ ರಾಜಕೀಯದಿಂದ ದೂರ ಉಳಿಯುವುದಾಗಿ ಹೇಳಿದ್ದ ಬಿಡಿಸಿಸಿ ಬ್ಯಾಂಕ್​ ಅಧ್ಯಕ್ಷ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಅಜಯ ಕುಮಾರ ಸರನಾಯಕ ಮತ್ತೆ ಚುನಾವಣಾ ಅಖಾಡಕ್ಕೆ ಇಳಿಯಲು ಮುಂದಾಗಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾನು ಕಾಂಗ್ರೆಸ್ ‌ಪಕ್ಷದ ಪ್ರಬಲ ಆಕಾಂಕ್ಷಿ ಎಂದು ಹೇಳುವ ಮೂಲಕ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಬಯಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನವನಗರದಲ್ಲಿರುವ ಡಿಸಿಸಿ ಬ್ಯಾಂಕಿನಲ್ಲಿ ಇಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

"ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಾಗಲಕೋಟೆ ಮತಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಈ ಸಂಬಂಧ ದೆಹಲಿ ಮಟ್ಟದಲ್ಲಿಯೂ ಚರ್ಚೆಯಾಗಿತ್ತು. ಈಗ ಲೋಕಸಭೆ ಚುನಾವಣೆ ಸ್ಪರ್ಧೆಗೆ ಅವಕಾಶ ನೀಡಬೇಕು ಎಂದು ಪಕ್ಷದ ವರಿಷ್ಠರು, ನಾಯಕರಿಗೆ ಮನವಿ ಮಾಡಿದ್ದೇನೆ. ರಾಜಕೀಯ ನಿಂತ ನೀರಲ್ಲ, ಹರಿಯುವ ನೀರು. ನನಗೆ ವಿಶ್ರಾಂತಿ ಬೇಕಿತ್ತು, ಆ ಕಾರಣದಿಂದ ಆಗ ರಾಜಕೀಯ ಬೇಡ ಅಂದಿದ್ದೆ. ಈಗ ಬೇಕು ಅಂತ ಅನಿಸುತ್ತಿದೆ ಅದಕ್ಕೆ ಮತ್ತೊಮ್ಮೆ ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದೇನೆ" ಎಂದರು.

"ಬೇರೆ ಪಕ್ಷದಿಂದ ಯಾವುದೇ ಆಹ್ವಾನ ಬಂದಿಲ್ಲ. ನಾನು ಕೂಡಾ ಕದತಟ್ಟಿ ಕೇಳಿಲ್ಲ. ಆದರೆ ಕಾಂಗ್ರೆಸ್​ನಿಂದ ಸ್ಪರ್ಧಿಸಲು ಅತೀವ ಆಸಕ್ತಿ ಹೊಂದಿದ್ದೇನೆ. ಯಾರಿಗೆ ಚುನಾವಣಾ ಎದುರಿಸುವ ಸಾಮರ್ಥ್ಯ, ಕಾರ್ಯಶೀಲತೆ ಇರುತ್ತದೆಯೋ ಅವರಿಗೆ ಟಿಕೆಟ್ ನೀಡುತ್ತಾರೆ ಎಂಬುದು ನನ್ನ ನಂಬಿಕೆ. ಪಕ್ಷದಲ್ಲಿ ಆಕಾಂಕ್ಷೆಗಳಿರುವುದು ಸಹಜ, ಆದರೆ ವರಿಷ್ಠರು ತೀರ್ಮಾನಕ್ಕೆ ಬದ್ಧ" ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕಿನ ವ್ಯವಹಾರದ ಬಗ್ಗೆ ಸಮಗ್ರ ಮಾಹಿತಿ ನೀಡಿದ ಅಜಯ ಕುಮಾರ ಸರನಾಯಕ, "ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್​ 2022-23ನೇ ಸಾಲಿನಲ್ಲಿ 11.28 ಕೋಟಿ ರೂ.ಗಳಷ್ಟು ನಿವ್ವಳ ಲಾಭ ಗಳಿಸಿದೆ. ಬ್ಯಾಂಕ್​ನ ಒಟ್ಟು 47 ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರಸಕ್ತ ವರ್ಷ 9 ಹೊಸ ಶಾಖೆಗಳನ್ನು ಪ್ರಾರಂಭಿಸಲಾಗುತ್ತದೆ. ಜಿಲ್ಲೆಯ 1324 ವಿವಿಧ ಸಹಕಾರಿ ಸಂಘಗಳು ಬ್ಯಾಂಕಿನ ಸದಸ್ಯತ್ವ ಪಡೆದುಕೊಂಡಿವೆ. ಈ ಪೈಕಿ 285 ಕೃಷಿ ಪತ್ತಿನ ಸಹಕಾರಿ ಸಂಘಗಳು ಸೇರಿವೆ" ಎಂದು ಮಾಹಿತಿ ನೀಡಿದರು.

"ಬ್ಯಾಂಕಿನ ಷೇರು ಬಂಡವಾಳ 186.89 ಕೋಟಿ ರೂ. ಇದ್ದು, 2023-24ನೇ ಸಾಲಿಗೆ 205.58 ಕೋಟಿ ರೂಗೆ ಗುರಿ ನಿಗದಿಪಡಸಲಾಗಿದೆ. ಒಟ್ಟು ನಿಧಿಗಳು 311.82 ಕೋಟಿ ರೂ.ಇದ್ದು, ಪ್ರಸಕ್ತ ವರ್ಷ 344.53 ಕೋಟಿ ರೂ, ಗುರಿ ನಿಗದಿಪಡಿಸಲಾಗಿದೆ. ಬ್ಯಾಂಕಿನಿಂದ ಪ್ರಸಕ್ತ ವರ್ಷ 2,59,087 ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 1346.46 ಕೋಟಿ ರೂ. ಬೆಳೆಸಾಲ ಹಾಗೂ 1778 ರೈತರಿಗೆ ಪ್ರತಿಶತ 3% ಬಡ್ಡಿದರದಲ್ಲಿ 105.25 ಕೋಟಿಯಷ್ಟು ಕೃಷಿ ಚಟುವಟಿಕೆಗಳಾದ ಪೈಪ್​ಲೈನ್, ಪಂಪ್​ಸೆಟ್, ಹೈನುಗಾರಿಕೆ, ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ, ಭೂ ಅಭಿವೃದ್ಧಿ ಹಾಗೂ ತೋಟಗಾರಿಕೆ ಬೆಳೆಗಳಾದ ರೇಷ್ಮೆ ಮತ್ತು ಟ್ರ್ಯಾಕ್ಟರ್ ಖರೀದಿ ಉದ್ದೇಶಗಳಿಗೆ ಮಾಧ್ಯಮಿಕ ಕೃಷಿ ಸಾಲ ನೀಡಲಾಗಿದೆ" ಎಂದು ವಿವರಿಸಿದರು.

ಬ್ಯಾಂಕಿನ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ, ನಿರ್ದೇಶಕ ಪ್ರಕಾಶ ತಪಶೆಟ್ಟಿ ಇದ್ದರು.

ಇದನ್ನೂ ಓದಿ:ಪಕ್ಷಕ್ಕೆ ಬಂದವರಿಗೆ ಸ್ವಾಗತ, ಆದರೆ ನಮ್ಮಲ್ಲಿನ ನಿಷ್ಠಾವಂತರಿಗೆ ತೊಂದರೆ ಆಗಬಾರದು : ಸಹಕಾರ ಸಚಿವ ಕೆ ಎನ್ ರಾಜಣ್ಣ

Last Updated : Aug 25, 2023, 4:47 PM IST

ABOUT THE AUTHOR

...view details