ಬಾಗಲಕೋಟೆ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಆಲ್ ಇಂಡಿಯಾ ಮಜ್ಲೀಸ್ -ಎ-ಇತೇಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷದ ಅಭ್ಯರ್ಥಿಗಳು 100 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂದು ಎಐಎಂಐಎಂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಉಸ್ಮಾನ್ ಗಣಿ ಹುಮನಾಬಾದ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ಎಐಎಂಐಎಂ ಪಕ್ಷ ಮುಸ್ಲಿಂ ಸಮಾಜದ ಪಕ್ಷವಲ್ಲ. ಇದೊಂದು ಜಾತ್ಯತೀತ ಪಕ್ಷವಾಗಿದೆ. ಎಲ್ಲ ಸಮಾಜದವರನ್ನು ಒಗ್ಗೂಡಿಸಿಕೊಂಡು ಹೋಗುವ ಪಕ್ಷವಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 52 ಕ್ಷೇತ್ರಗಳಲ್ಲಿ ಆದ್ಯತೆ ನೀಡಲಾಗುತ್ತದೆ. ಪ್ರತಿಯೊಂದು ಮನೆ ಮನೆಗೆ ತಲುಪಿ ಪಕ್ಷದ ಸಿದ್ಧಾಂತ ತಿಳಿಸುವ ಕೆಲಸ ನಡೆಯಲಿದೆ ಎಂದು ಹೇಳಿದರು.
ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸಲು ಎಐಎಂಐಎಂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಓವೈಸಿ ಹಾಗೂ ಅಕ್ಬರುದ್ದೀನ್ ಓವೈಸಿ ಅವರು ಬಾಗಲಕೋಟೆ ಅಥವಾ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ ಎಂದು ಇದೇ ವೇಳೆ ಹೇಳಿದರು.
ಜನ ನಮ್ಮ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ: ರಾಜ್ಯದಲ್ಲಿ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಹುಬ್ಬಳ್ಳಿ ಮಹಾನಗರ ಪಾಲಿಕೆಯಲ್ಲಿ 3, ಬೆಳಗಾವಿ 1, ವಿಜಯಪುರ ಮಹಾನಗರ ಪಾಲಿಕೆಯಲ್ಲಿ 2 ಹಾಗೂ ಕೋಲಾರ ಪುರಸಭೆಯಲ್ಲಿ 2 ಸ್ಥಾನಗಳಲ್ಲಿ ಎಐಎಂಐಎಂ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಜನ ಕೂಡ ನಮ್ಮ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ ಎಂದರು.
ವಿನಾಕಾರಣ ಜಾತೀಯತೆ ಮಾಡಬಾರದು : ಸತೀಶ್ ಜಾರಕಿಹೊಳಿಯವರು ವಿವಾದಾತ್ಮಕ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಅವರವರ ಭಾವಕ್ಕೆ ತಕ್ಕಂತೆ ಧರ್ಮಗಳು ಇದೆ. ಧರ್ಮದ ಬಗ್ಗೆ ಗೊತ್ತಿಲ್ಲದವರು ಏನಾದರೂ ಮಾತನಾಡುತ್ತಾರೆ. ಈ ಭಾರತ ದೇಶದಲ್ಲಿ ಹಿಂದೂ ಮುಸ್ಲಿಂ, ಸಿಖ್, ಬೌದ್ಧ ಎಲ್ಲ ಧರ್ಮದವರು ಒಂದಾಗಿ ಬಾಳುತ್ತಾರೆ. ವಿನಾಕಾರಣ ಜಾತೀಯತೆ ಮಾತನಾಡಬಾರದು ಎಂದರು.
ನಮ್ಮ ಪಕ್ಷವು ಜಾತ್ಯತೀತವಾಗಿದ್ದು, ಹಿಂದೂ, ದಲಿತ ಹಾಗೂ ಬ್ರಾಹ್ಮಣ ಸಮಾಜದವರು ಸ್ವಯಂ ಪ್ರೇರಿತರಾಗಿ ಬಂದರೂ ಸ್ವಾಗತ ಇದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಪಯಾರ್ಯವಾಗಿ ನಮ್ಮ ಪಕ್ಷ ಬೆಳೆಯುತ್ತಿದೆ.ಕಾಂಗ್ರೆಸ್ ಪಕ್ಷದವರು ನಮ್ಮ ಪಕ್ಷ ಬಿ ಟೀಮ್ ಎಂದು ಆರೋಪಿಸುತ್ತಾರೆ. ಆದರೆ ನಮ್ಮದು ಎ ಟೀಮ್ ಮುಂದೆ ಈ ದೇಶದಲ್ಲಿ, ರಾಜ್ಯದಲ್ಲಿ ಎಐಎಂಐಎಂ ಪಕ್ಷ ಆಡಳಿತ ಚುಕ್ಕಾಣಿ ಹಿಡಿಯುತ್ತದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಇದನ್ನೂ ಓದಿ :ನಾವು ಪಾಕಿಸ್ತಾನದ ಹೆಸರು ಕೂಡಾ ಹೇಳುವುದಿಲ್ಲ, ಯತ್ನಾಳ್ ಅವ್ರಿಗೆ ಅಷ್ಟೊಂದು ಪ್ರೀತಿ ಯಾಕೆ?: ಓವೈಸಿ