ಬಾಗಲಕೋಟೆ: ನವ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಕೈಜೋಡಿಸಬೇಕು. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸು ನನಸು ಮಾಡಿದಾಗ ಮಾತ್ರ ಭಾರತ ಸಮಗ್ರ ಅಭಿವೃದ್ಧಿ ಹೊಂದುತ್ತದೆ. ಮುಖ್ಯವಾಗಿ ತೃತೀಯ ಲಿಂಗಿಗಳಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು. ಈ ಸಂಬಂಧ ಸರ್ಕಾರ ತೃತೀಯ ಲಿಂಗಿಗಳಿಗೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಿ ಅನುದಾನ ಒದಗಿಸಬೇಕು ಎಂದು ನಟ ಚೇತನ್ ಒತ್ತಾಯಿಸಿದರು.
ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 15 ಜಿಲ್ಲೆಗಳಲ್ಲಿ ಜೋಗಪ್ಪ ಜನಾಂಗವಿದೆ. ಇವರು ಕಲಾವಿದರು. ಪಾರಂಪರಿಕ ಕಲೆಯನ್ನು ಉಳಿಸಿಕೊಂಡು ಬರುತ್ತಿದ್ದಾರೆ. ಇವರಿಗೆ ಪ್ರತ್ಯೇಕ ನಿಗಮ ಸ್ಥಾಪಿಸಬೇಕು. ಸವದತ್ತಿಯಲ್ಲಿ ಪ್ರತ್ಯೇಕ ಭವನ ನಿರ್ಮಿಸಬೇಕು ಎಂದು ಹೇಳಿದರು. ಜೊತೆಗೆ ಮಂಗಳ ಮುಖಿಯರನ್ನು ಕಲಾವಿದರೆಂದು ಗುರುತಿಸಬೇಕು. ಈ ಸಮುದಾಯಕ್ಕೆ ಆರ್ಥಿಕ ಬಲ ಇಲ್ಲದಂತಾಗಿದ್ದು, ಈ ನಿಟ್ಟಿನಲ್ಲಿ ಅವರಿಗೂ ಶಕ್ತಿ, ಗೃಹಲಕ್ಷ್ಮೀ ಯೋಜನೆಗಳ ಅನುಕೂಲ ಸಿಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಪಠ್ಯಕ್ರಮ ಪರಿಷ್ಕರಣೆ ಬಗ್ಗೆ ಮಾತನಾಡಿ, ಪಠ್ಯ ಪರಿಷ್ಕರಣೆ ಪಕ್ಷಕ್ಕೆ ತಕ್ಕಂತೆ ನಡೆಯುತ್ತಿದೆ. ಬಿಜೆಪಿಯವರು ಅವರಿಗೆ ಬೇಕಾದ ರೀತಿಯಲ್ಲಿ ಪಠ್ಯ ಪರಿಷ್ಕರಣೆ ಮಾಡಿದರು. ಕಾಂಗ್ರೆಸ್ನವರು ತಮಗೆ ಬೇಕಾದ ವ್ಯಕ್ತಿಗಳ ಪಠ್ಯವನ್ನು ಹಾಕುತ್ತಿದ್ದಾರೆ. ಈ ರೀತಿ ಮಾಡುವುದಕ್ಕಿಂತ ಜೋಗಪ್ಪ ಅವರ ಪಠ್ಯವನ್ನು ಅಳವಡಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದರು.