ಬಾಗಲಕೋಟೆ: ಹಣ್ಣು, ತರಕಾರಿ ಹಾಗೂ ಹೂಗಳ ರಪ್ತು ಪ್ರಮಾಣ ಶೇ 2.5 ರಿಂದ ಶೇ 5.5ಕ್ಕೆ ತಲುಪಿದ್ದು, ಅದನ್ನು ಶೇ 20ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಡಾ. ಕೆ.ಸಿ. ನಾರಾಯಣ ಗೌಡ ಹೇಳಿದರು.
ತೋಟಗಾರಿಕಾ ವಿಶ್ವವಿದ್ಯಾಲಯ (ತೋವಿವಿ)ದಲ್ಲಿ ಹಮ್ಮಿಕೊಂಡ ತೋಟಗಾರಿಕೆ ಮೇಳದ 2ನೇ ದಿನ ಅತ್ಯುತ್ತಮ ತೋಟಗಾರಿಕೆ ರೈತ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆನ್‌ಲೈನ್ ವರ್ಚುವಲ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ತೋಟಗಾರಿಕೆ ಬೆಳೆಗಳಿಗೆ ಹೆಚ್ಚು ಉತ್ತೇಜನ ನೀಡುವ ಮೂಲಕ ತೋವಿವಿಯ ಸಂಶೋಧನೆಗಳು ರೈತರಿಗೆ ತಲುಪಿ ಹೊಸ ಶಕ್ತಿ ತುಂಬುವ ಕೆಲಸವಾಗಬೇಕು ಎಂದರು.
ಉದ್ಯಾಗಿನಿಯಲ್ಲಿ ತೋಟಗಾರಿಕಾ ಮೇಳ ರೈತರು ಹೆಚ್ಚಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಬೇಕು. ಇದರಿಂದ ತಮ್ಮ ಆರ್ಥಿಕ ಮಟ್ಟವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಹಣ್ಣು, ತರಕಾರಿಗಳ ರಫ್ತಿನ ಪ್ರಮಾಣವನ್ನು ಶೇ 20ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ. ರಾಜ್ಯದ ತೋಟಗಾರಿಕೆ ವಿಶ್ವವಿದ್ಯಾಲಯ ರಾಷ್ಟ್ರ ಹಾಗೂ ಅಂತರರಾಷ್ಟ್ರ ಮಟ್ಟದಲ್ಲಿ ಹೆಸರು ತರುವಂತ ಕಾರ್ಯವಾಗಬೇಕು. ಇದು ನಮ್ಮ ಆಶಯವಾಗಿದೆ ಎಂದು ತಿಳಿಸಿದರು.
ಕೊರೊನಾ ಹಿನ್ನೆಲೆ ಸರ್ಕಾರದ ರಾಜಸ್ವಕ್ಕೆ ಕೊರತೆ ಇರುವುದರಿಂದ ಅನುದಾನ ಬಿಡುಗಡೆಗೆ ವಿಳಂಬವಾಗಿದೆ. ಆ ಕೊರತೆಯನ್ನು ನೀಗಿಸಲು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ತೋವಿವಿ ನೀಡಿರುವ ಮನವಿಯನ್ನು ಸರ್ಕಾರ ಗಂಭೀರವಾಗಿ ಪರಿಣಿಸಿದೆ ಎಂದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ತೋಟಗಾರಿಕೆ ಬೆಳೆಗೆ ಆದ್ಯತೆ ನೀಡಿ ಇಳುವರಿಯನ್ನು ಹೆಚ್ಚಿಸಬೇಕು. ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವದರಿಂದ ಖಾಯಿಲೆಗಳ ಪ್ರಮಾಣ ಸಹ ಕಡಿಮೆಯಾಗುತ್ತದೆ. ಹಣ್ಣುಗಳನ್ನು ನಿರೀಕ್ಷಿತ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಗುತ್ತಿಲ್ಲ. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿ ಬರುವ ಸಂಶೋಧನೆಗಳು ಆಗಬೇಕು. ಕೇವಲ ಉತ್ಪಾದನೆಯಲ್ಲಿ ಗಮನ ಹರಿಸದೇ ಮಾರುಕಟ್ಟೆಯ ಸ್ಥಿತಿಗತಿಗಳ ಬಗ್ಗೆಯೂ ರೈತರಿಗೆ ಸಲಹೆ ನೀಡಬೇಕು. ಬೆಳೆದ ರೈತನಿಗೆ ಲಾಭ ದೊರೆಯುವಂತೆ ಮಾಡುವ ಕಾರ್ಯ ವಿಶ್ವವಿದ್ಯಾಲಯದ್ದಾಗಿದೆ ಎಂದರು.
ನವದೆಹಲಿಯ ಕೃಷಿ ತಂತ್ರಜ್ಞಾನ ಅನ್ವಯಿಕ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ವೆಂಕಟಸುಬ್ರಮಣ್ಯ ಮಾತನಾಡಿ ಈ ವರ್ಷ ಹಣ್ಣು ಮತ್ತು ತರಕಾರಿ ಬೆಳೆಗಳ ವರ್ಷವಾಗಿರುವುದರಿಂದ ಅವರುಗಳಿಗೆ ಸಾಕಷ್ಟು ಉತ್ತೇಜನ, ಬಳಕೆ ಹೆಚ್ಚಾಗಬೇಕು. ವೈವಿಧ್ಯಮಯ ಸಾಂಬಾರು ಪದಾರ್ಥಗಳ ಬೆಳೆಗಳನ್ನು ರೈತರು ಅಳವಡಿಸಿಕೊಳ್ಳಬೇಕು. ತಮ್ಮ ಹೊಲ ಮತ್ತು ತೋಟಗಳಲ್ಲಿ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ಬಳಕೆ ಅಗತ್ಯವಾಗಿದೆ. ವಾತಾವರಣದಲ್ಲಿ ಉಂಟಾಗುವ ಬದಲಾವಣೆಯಿಂದ ಬೆಳೆಗಳು ಬಹಳಷ್ಟು ನಾಶವಾಗುತ್ತಿವೆ. ಇದಕ್ಕೆ ಶಕ್ತಿ ತುಂಬಲು ಸರ್ಕಾರ ಮುಂದಾಗಬೇಕು. ಉತ್ಪನ್ನಗಳ ಶೇಖರಣೆಗೆ ಶೀತಲ ಘಟಕ ಸ್ಥಾಪನೆ, ಶೀತಲ ವಾಹನ ಸೌಕರ್ಯ ಅಗತ್ಯವಾಗಿದೆ ಎಂದರು.
23 ಫಲಶ್ರೇಷ್ಠರಿಗೆ ಪ್ರಶಸ್ತಿ ಪ್ರದಾನ:
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಪ್ರತಿ ಜಿಲ್ಲೆಗೆ ಒಬ್ಬರಂತೆ ಒಟ್ಟು 23 ಜನರಿಗೆ ಅತ್ಯುತ್ತಮ ತೋಟಗಾರಿಕೆ ರೈತ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬಾಗಲಕೋಟೆ ಜಿಲ್ಲೆಯ ಶರಣವ್ವ ಹಾದಿನಮಿ, ಬೆಳಗಾವಿಯ ಲಕ್ಷ್ಮೀಕಾಂತ ಸೊಲ್ಲಾಪೂರ, ಬೆಂಗಳೂರು ಗ್ರಾಮಾಂತರ ಪ್ರದೇಶದ ನಿತುನ್ ಎನ್, ಬೆಂಗಳೂರು ನಗರದ ಗೋಪಾಲಕೃಷ್ಣ ಎಚ್.ಕೆ, ಬೀದರನ ವಿಜಯ ಸೂರ್ಯವಂಶಿ, ಚಾಮರಾಜನಗರದ ನಾಗಾರ್ಜುನ ಕುಮಾರ್ ಎಸ್.ಎಂ, ಚಿಕ್ಕಬಳ್ಳಾಪೂರದ ಶಿವಪ್ರಸಾದ ಎಸ್.ಎನ್, ಧಾರವಾಡ ಜಿಲ್ಲೆಯ ಬಸವರಾಜ ವಿಭೂತಿ, ಗದಗ ಜಿಲ್ಲೆಯ ಹನುಮಪ್ಪ ಸಾಲಿ, ಹಾವೇರಿ ಜಿಲ್ಲೆಯ ಗೋಪಾಲಗೌಡ ಬಸನಗೌಡರ, ಹಾಸನ ಜಿಲ್ಲೆಯ ಕೆ.ಪಿ.ಗೋಪಕುಮಾರ, ಕಲಬುರ್ಗಿ ಜಿಲ್ಲೆಯ ನಿಜಲಿಂಗಪ್ಪ ಕಲ್ಯಾಣ, ಕೋಲಾರ ಜಿಲ್ಲೆಯ ಎನ್.ಧರ್ಮಲಿಂಗಂ ನಾರಾಯಣಸ್ವಾಮಿ, ಮಂಡ್ಯ ಜಿಲ್ಲೆಯ ಪಿ.ಎಸ್.ವಿಜಯಕುಮಾರ, ಮೈಸೂರ ಜಿಲ್ಲೆಯ ಶ್ರೀಮತಿ ದಾಸಿ, ರಾಮನಗರ ಜಿಲ್ಲೆಯ ಹೊನ್ನೆಗೌಡ ಮುನಿಯಪ್ಪ, ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮಹಾಬಲೇಶ್ವರ ಹೆಗಡೆ, ತುಮಕೂರು ಜಿಲ್ಲೆಯ ರಾಜಶೇಖರಯ್ಯ ಬಸವೇಗೌಡ, ವಿಜಯಪುರ ಜಿಲ್ಲೆಯ ಪ್ರವೀಣ ಬಾಳಿಗೇರಿ, ಯಾದಗಿರಿ ಜಿಲ್ಲೆಯ ಅನಂತಪ್ಪ ರಾಥೋಡ, ಬಳ್ಳಾರಿ ಜಿಲ್ಲೆಯ ಸತ್ಯನಾರಾಯಣ ಶೆಟ್ಟಿ, ಕೊಪ್ಪಳ ಜಿಲ್ಲೆಯ ಮಾರುತಿ ನಾಯಕ, ರಾಯಚೂರು ಜಿಲ್ಲೆಯ ಶಿವಕುಮಾರ ಪಾಟೀಲ ಅವರಿಗೆ ಪ್ರಶಸ್ತಿ ನೀಡಲಾಯಿತು.