ಬಾಗಲಕೋಟೆ:ಜಿಲ್ಲೆಯ ಮುಧೋಳ ತಾಲೂಕಿನ ಸಂಗಾನಟ್ಟಿ ಗ್ರಾಮದ ನಿವಾಸಿ ಮಹಾಲಿಂಗಪ್ಪ ಹಿಟ್ನಾಳ ಎಂಬ ಯುವ ರೈತ ತಮ್ಮ ಒಂದು ಎಕರೆ ಜಮೀನಿನಲ್ಲಿ ಬೆಲ್ಲದ ಆಲೆಮನೆ ಮಾಡಿಕೊಂಡು, ವಿವಿಧ ಬಗೆಯ ಸಾವಯವ ಬೆಲ್ಲ ತಯಾರಿಸುವ ಮೂಲಕ ಗಮನ ಸೆಳೆದಿದ್ದಾರೆ.
ಕೋವಿಡ್ ಸಂಕಷ್ಟದಲ್ಲೂ ಬದುಕು ಸಿಹಿ; ಸಾವಯವ ಬೆಲ್ಲ ತಯಾರಿಸಿ ಸೈ ಎನಿಸಿಕೊಂಡ ಯುವ ರೈತ! ಪೇಡಾ ಮಾದರಿಯಲ್ಲಿ 5 ಗ್ರಾಂ ಹಾಗೂ 10 ಗ್ರಾಂ ಬೆಲ್ಲವನ್ನು ಮಾಡಿ ಮಾರಾಟ ಮಾಡುತ್ತಿದ್ದಾರೆ. ಕವಾ ಹಾಗೂ ಬೆಲ್ಲದ ಪೇಡಾ ಮಾಡಿರುವುದು ದೇಶದಲ್ಲಿಯೇ ಪ್ರಥಮ ಪ್ರಯೋಗವಾಗಿದೆ. ಇದರ ಜೊತೆಗೆ ಶುಂಠಿ, ಏಲಕ್ಕಿ, ಲವಂಗ್ ಸೇರಿದಂತೆ ವಿವಿಧ 14 ಬಗೆಯ ಸಾವಯವ ಬೆಲ್ಲವನ್ನು ತಯಾರಿಸಿ, ರಾಜ್ಯದ ವಿವಿಧ ಪ್ರದೇಶ ಹಾಗೂ ಹೂರ ರಾಜ್ಯಗಳಿಗೂ ಮಾರಾಟ ಮಾಡುತ್ತಾರೆ.
50 ರೂಪಾಯಿ ದಿಂದ 550 ರೂಪಾಯಿಗಳ ವರೆಗೆ ದರ ನಿಗದಿ ಮಾಡಿ, ಆಯಾ ದರಕ್ಕೆ ತಕ್ಕಂತೆ ಗುಣಮಟ್ಟ ಹಾಗೂ ಸಾವಯವ ಬೆಲ್ಲವನ್ನು ನೀಡುತ್ತಾರೆ. ಕೊರೊನಾ ಸಮಯದಲ್ಲಿ ಶುಂಠಿಯ ಬೆಲ್ಲವನ್ನು ಮಾಡಿ ಮಾರಾಟ ಮಾಡಿದ್ದಾರೆ. ರಾಸಾಯನಿಕ ಮಿಶ್ರಿತ ಬೆಲ್ಲ ಸೇವನೆಯಿಂದ ಆರೋಗ್ಯಕ್ಕೆ ತೊಂದರೆ ಉಂಟಾಗುತ್ತದೆ. ಆದರೆ ಇವರು ತಯಾರಿಸುವ ಸಾವಯವ ಬೆಲ್ಲ ಆರೋಗ್ಯಕ್ಕೂ ಅನುಕೂಲಕರವಾಗಲಿದೆ. ಆದ್ದರಿಂದ ಇಲ್ಲಿ ತಯಾರಗುವ ಬೆಲ್ಲಕ್ಕೆ ಬೇಡಿಕೆ ಹೆಚ್ಚಾಗಿದೆ.
ಒಂದೇ ಆಲೆಮನೆಯಿಂದ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ರೈತರು ಸಾವಯವ ಬೆಲ್ಲ ತಯಾರಿಸುವ ಆಲೆಮನೆ ನಿರ್ಮಾಣ ಮಾಡಿಕೊಳ್ಳುವಂತೆ ಮಹಾಲಿಂಗಪ್ಪ ಹಿಟ್ನಾಳ ಮನವಿ ಮಾಡಿದ್ದಾರೆ. ರೈತರು ಬೆಳೆದ ಕಬ್ಬುನ್ನು ನೇರವಾಗಿ ನುರಿಸಿ, ಬೃಹತ್ ಕಡಾಯಿಯಲ್ಲಿ ಕಬ್ಬಿನ ರಸವನ್ನು ಕಾಯಿಸಿ, ಗುಣಮಟ್ಟದ ಬೆಲ್ಲ ತಯಾರಿಸುತ್ತಾರೆ. ಇದರಿಂದ ಒಂದು ಕೆಜಿಗೆ ಬೆಲ್ಲ ಹಾಗೂ ಪೌಡರ ಬೆಲ್ಲ ಸೇರಿದಂತೆ ಇತರ ಬಗೆ ಬಗೆಯ ಬೆಲ್ಲವನ್ನು ತಯಾರಿಸಿ ಮಾರಾಟ ಮಾಡುತ್ತಾರೆ.
ಇದರಿಂದ ಸ್ಥಳೀಯರಿಗೆ ಉದ್ಯೋಗ ಅವಕಾಶ ನೀಡುವುದರ ಜೊತೆಗೆ ರೈತರಿಗೆ ಕಬ್ಬು ಸಕ್ಕರೆ ಕಾರ್ಖಾನೆಗೆ ಕೂಡುವ ಬದಲು ಸ್ವತಃ ಆಲೆಮನೆ ನಿರ್ಮಾಣ ಮಾಡಿ, ಗುಣಮಟ್ಟದ ಬೆಲ್ಲ ತಯಾರಿಸಿದರೆ ಸಾಕಷ್ಟು ಲಾಭ ಗಳಿಸಬಹುದು ಎಂದು ರೈತರಿಗೆ ಮಾಹಿತಿ ನೀಡಿದ್ದಾರೆ.