ಬಾಗಲಕೋಟೆ: ಆಧುನಿಕ ದಿನಗಳಲ್ಲಿ ಉದ್ಯೋಗ ಎಂಬುದು ಮರೀಚಿಕೆಯಾಗಿದ್ದು, ಯುವ ಜನತೆ ಸ್ವಯಂ ಉದ್ಯೋಗದಲ್ಲಿ ತೊಡಗಿದ್ದಾರೆ. ಬೀಳಗಿ ತಾಲೂಕಿನ ಸುನಗ ಗ್ರಾಮದ ಚಂದ್ರಶೇಖರ್ ಸಾಬಣ್ಣ ಪಂಡರಿ ಎಂಬ ಯುವಕ, ಬಾಳೆ ಬೆಳೆದು ಬಂಗಾರದ ಬದುಕನ್ನು ಕಟ್ಟಿಕೊಂಡು ಯುವಕರಿಗೆ ಮಾದರಿಯಾಗಿದ್ದಾನೆ.
ಚಂದ್ರಶೇಖರ್ ಬಿ.ಎ ಎಂಪಿಎಡ್ ಪದವೀಧರರಾಗಿದ್ದು, ಡಿ. ದೇವರಾಜ ಅರಸು ನಿಗಮದ ಗಂಗಾ ಕಲ್ಯಾಣ ಯೋಜನೆಯ ಸಹಾಯದಡಿ, ಒಂದು ಬೋರವೆಲ್ ಹಾಕಿಸಿಕೊಂಡು ತಮ್ಮ 3 ಎಕರೆ 10 ಗುಂಟೆ ಜಮೀನಿನಲ್ಲಿ ಬಾಳೆ ಬೆಳೆದು ಲಕ್ಷಾಂತರ ರೂ. ಆದಾಯ ಪಡೆಯುತ್ತಿದ್ದಾರೆ. ಈ ಮೊದಲು ಚಂದ್ರಶೇಖರ್ ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಅಲ್ಲಿಯೂ ಸರಿಯಾದ ವೇತನ ದೊರೆಯದ ಕಾರಣ, ಕೃಷಿ ಆರಂಭಿಸಿ ಆರಾಮಾಗಿ ಜೀವನ ನಡೆಸುತ್ತಿದ್ದಾರೆ.
ಮೊದಲ ಬೆಳೆಯಾಗಿ ಚೆಂಡು ಹೂ ಬೆಳೆಯನ್ನು ಬೆಳೆದು, ಉತ್ತಮ ಆದಾಯ ಬಂದ ನಂತರ ತೋಟಗಾರಿಗೆ ವಿಶ್ವವಿದ್ಯಾಲಯ ಬಾಗಲಕೋಟೆ ಅವರಿಂದ ಮಣ್ಣು ಮತ್ತು ನೀರಿನ ಪರೀಕ್ಷೆ ಮಾಡಿಸಿ ಬಾಳೆ ಬೆಳೆ ಬೆಳೆಯಲು ಪ್ರಾರಂಭಿಸಿದರು. ತೋಟಗಾರಿಕೆ ಇಲಾಖೆಯ ವಿಜ್ಞಾನಿಗಳ ಮಾರ್ಗದರ್ಶನದೊಂದಿಗೆ ಭೂಮಿಯನ್ನು ತಯಾರು ಮಾಡಿಸಿ, ಮಹಾರಾಷ್ಟ್ರದ ಜಲಗಾಂವದಿಂದ ಬಾಳೆ ಸಸಿಗಳನ್ನು ತಂದು ನಾಟಿ ಮಾಡಿದ್ದಾರೆ. 11 ತಿಂಗಳಲ್ಲಿ ಬೆಳೆಯನ್ನು ಸಂಪೂರ್ಣವಾಗಿ ಬೆಳೆದು ಕಟಾವು ಮಾಡಿ, ಸುಮಾರು ₹ 8 ಲಕ್ಷ ಆದಾಯ ಪಡೆದಿದ್ದಾರೆ. ಈ ಬೆಳೆ ಬೆಳೆಯಲು ₹ 2 ಲಕ್ಷ ಖರ್ಚಾಗಿದೆ.
ಇದರ ಜೊತೆಗೆ ಉಪ ಕಸಬುಗಳಾದ ಕುರಿ ಸಾಕಣೆ ಮಾಡುತ್ತಿದ್ದು, ಇದರಿಂದ ₹ 60 ಸಾವಿರ ಆದಾಯ ಪಡೆಯುತ್ತಿದ್ದಾರೆ. ಈ ಮೂಲಕ ಕುಟುಂಬ ನಿರ್ವಹಣೆ ಜೊತೆಗೆ ಕೃಷಿ ಮತ್ತು ಹೈನುಗಾರಿಕೆಯಲ್ಲಿ ತಮ್ಮದೇ ಆದ ಹೆಸರು ಮಾಡಲು ಪ್ರಯತ್ನಿಸುತ್ತಿದ್ದಾರೆ. ಇವರ ಈ ಪಯತ್ನಕ್ಕೆ ಇಲಾಖೆಯಿಂದ ಅಭಿನಂದಿಸಲಾಗಿದ್ದು, ಇಲಾಖೆಯ ಸಹಾಯಕ್ಕೆ ತಮ್ಮ ಅಭಿನಂದನೆಗಳನ್ನು ತಿಳಿಸಿದ್ದಾರೆ.