ಬಾಗಲಕೋಟೆ: ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವಕ್ಕೆಂದು ತೆರಳಿ ನಾಪತ್ತೆಯಾಗಿರುವ ಕಾರ್ಯಕರ್ತನ ಮನೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಅಡಿಹುಡಿ ಗ್ರಾಮದ ಗಿರಿಮಲ್ಲಪ್ಪ ನಾಪತ್ತೆಯಾದವರು.
ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಭಾಗವಹಿಸಲು ಇವರು ಹೋಗಿದ್ದರು. ಆದ್ರೆ ಬಳಿಕ ಗಿರಿಮಲ್ಲಪ್ಪ ವಾಪಸ್ ಮನೆಗೆ ಬಾರದ ಹಿನ್ನೆಲೆ ಕುಟುಂಬಸ್ಥರು ಚಿಂತೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಈ ಹಿನ್ನೆಲೆ ಜಮಖಂಡಿ ತಾಲೂಕಿನಲ್ಲಿ ಪ್ರವಾಸದಲ್ಲಿದ್ದ ಸಿದ್ದರಾಮಯ್ಯನವರು ಗಿರಿಮಲ್ಲಪ್ಪ ಅವರ ಕುಟುಂಬದವರನ್ನು ಸಿದ್ದರಾಮಯ್ಯ ಭೇಟಿಯಾಗಿ ಧೈರ್ಯ ತುಂಬಿದರು. ನಾಪತ್ತೆಯಾಗಿರುವ ಗಿರಿಮಲ್ಲಪ್ಪನನ್ನು ಹುಡುಕಾಡುವ ಎಲ್ಲ ಪ್ರಯತ್ನ ಮಾಡುವ ಭರವಸೆ ನೀಡಿದರು.
ಪೊಲೀಸರ ಪ್ರಕಾರ ಗಿರಿಮಲ್ಲಪ್ಪ ಜೀವಂತ ಇದ್ದಾನೆ. ಎಲ್ಲಿಯೂ ಹೋಗಿಲ್ಲ. ಶೀಘ್ರವಾಗಿ ಹುಡುಕಿ ಕರೆತರುವ ಪ್ರಯತ್ನ ಮಾಡಲಾಗುತ್ತದೆ. ಧೈರ್ಯವಾಗಿ ಇರಿ ಎಂದು ಕುಟುಂಬದವರಿಗೆ ಸಿದ್ದರಾಮಯ್ಯ ಸಾಂತ್ವನ ನೀಡಿದರು. ಹಾಗೆಯೇ ಮಕ್ಕಳ ಶಿಕ್ಷಣದ ಜೊತೆ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡುವುದಾಗಿಯೂ ಭರವಸೆ ನೀಡಿದರು.