ಮಹಿಳೆಯರಿಗೆ ಸಹ ಕ್ರೀಡೆಯಲ್ಲಿ ಉತ್ತೇಜನ ನೀಡಬೇಕು ಎಂಬ ದೃಷ್ಟಿಯಿಂದ ಕಬಡ್ಡಿ ಪಂದ್ಯಾವಳಿ ಆಯೋಜನೆ ಬಾಗಲಕೋಟೆ :ಗ್ರಾಮೀಣ ಕ್ರೀಡೆ ಕಬಡ್ಡಿ ನಶಿಸಿ ಹೋಗುವ ಕಾಲದಲ್ಲಿಜಿಲ್ಲೆಯ ಬೆಲ್ಲದ ನಾಡು ಮಹಾಲಿಂಗಪುರ ಪಟ್ಟಣದಲ್ಲಿ ರಾಷ್ಟ್ರದ ಮಟ್ಟದ ಮಹಿಳಾ ಕಬಡ್ಡಿ ಪಂದ್ಯಾವಳಿಯ ಆಯೋಜನೆ ಮಾಡುವ ಮೂಲಕ ಗಮನ ಸೆಳೆಯಲಾಗಿದೆ. ಮಹಿಳಾ ಎ ಗ್ರೇಡ್ ಕಬಡ್ಡಿ ಪಂದ್ಯಾವಳಿಗೆ ದೇಶದ ವಿವಿಧ ರಾಜ್ಯಗಳಿಂದ ಮಹಿಳಾ ಕ್ರೀಡಾ ಪಟುಗಳು ಆಗಮಿಸಿದ್ದಾರೆ. ಸಿದ್ದು ಕೊಣ್ಣೂರ ಸ್ಪೋರ್ಟ್ಸ್ ಕಬ್ಲ್ ವತಿಯಿಂದ ಈ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿದೆ.
ರಾಷ್ಟ್ರದ ಮಟ್ಟದ ಮಹಿಳಾ ಕಬಡ್ಡಿ ಪಂದ್ಯಾವಳಿಯನ್ನು ಸ್ಥಳೀಯ ಕ್ರೀಡಾ ಪ್ರೇಮಿಗಳಿಗೆ ಆಸಕ್ತಿ ಮೂಡಿಸುವ ಸಲುವಾಗಿ ಏರ್ಪಾಡು ಮಾಡಲಾಗಿದೆ. ಮಹಾರಾಷ್ಟ್ರ, ಗೋವಾ, ತಮಿಳುನಾಡು, ಕೇರಳ, ದೆಹಲಿ, ಪಂಜಾಬ್ ಸೇರಿದಂತೆ ಒಟ್ಟು ವಿವಿಧ ರಾಜ್ಯಗಳಿಂದ 20 ಮಹಿಳಾ ತಂಡಗಳು ಆಗಮಿಸಿದ್ದಾರೆ. ಪ್ರಥಮ ಬಹುಮಾನ 1.50 ಲಕ್ಷ ,ದ್ವೀತಿಯ ಬಹುಮಾನ 1 ಲಕ್ಷ ತೃತೀಯ ಬಹುಮಾನ 50 ಸಾವಿರ ಬಹುಮಾನ ಇಡಲಾಗಿದೆ.
ಮೂರು ದಿನಗಳ ಕಾಲ ನಡೆಯಲಿರುವ ಈ ಮಹಿಳಾ ಕಬಡ್ಡಿ ಪಂದ್ಯಾವಳಿಯನ್ನು ನೋಡಲು ವಿವಿಧ ಭಾಗಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ. ಸಿದ್ದು ಕೊಣ್ಣೂರ ಎಂಬ ಸ್ಥಳೀಯ ಯುವ ಮುಖಂಡರು ಇಂತಹ ಕ್ರೀಡೆಯನ್ನು ಆಯೋಜನೆ ಮಾಡುವ ಮೂಲಕ ಕ್ರೀಡಾ ಪಟುಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಪರುಷರಿಗೆ ಉತ್ತೇಜನ ನೀಡುವಂತೆ, ಮಹಿಳೆಯರಿಗೂ ಸಹ ಕ್ರೀಡೆಯಲ್ಲಿ ಉತ್ತೇಜನ ನೀಡಬೇಕು ಎಂಬ ದೃಷ್ಟಿಯಿಂದ ಎ ಗ್ರೇಡ್ ಮಹಿಳಾ ಕ್ರೀಡಾ ಪಟುಗಳನ್ನು ಕರೆಯಿಸಿ, ಪಂದ್ಯಾವಳಿ ನಡೆಸುತ್ತಿದ್ದೇವೆ ಎಂದು ಸಿದ್ದು ಕೊಣ್ಣೂರ ಎಂಬ ಯುವ ಮುಖಂಡ ಹೇಳಿದ್ದಾರೆ.
ನೇಕಾರರ ಕುಂಟುಂಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಈ ಪ್ರದೇಶದಲ್ಲಿ ಮನರಂಜನೆ ಆಗಲಿ ಹಾಗೂ ಭವಿಷ್ಯದಲ್ಲಿ ಮಕ್ಕಳಿಗೆ ಕ್ರೀಡೆಯ ಬಗ್ಗೆ ಉತ್ತೇಜನ ದೂರಕಲಿ ಎಂಬ ದೃಷ್ಟಿಯಿಂದ ಕ್ರೀಡೆಯನ್ನು ಆಯೋಜನೆ ಮಾಡಲಾಗಿದೆ. ಇಂದಿನ ಆಧುನಿಕ ಯುಗದ ಭರಾಟೆಯಿಂದಾಗಿ ಮಕ್ಕಳು ಕೇವಲ ಮೊಬೈಲ್ ಎಂಬ ಮಾಯಾ ಜಾಲಕ್ಕೆ ಸಿಲುಕಿಕೊಂಡು ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಇಂತಹ ಕಾಲಘಟ್ಟದಲ್ಲಿರುವಾಗ ಮಕ್ಕಳಿಗೆ ಮೊಬೈಲ್ನಿಂದಾಗಿ ಕ್ರೀಡೆ ಬಗ್ಗೆ ಉತ್ತೇಜನ ಕಡಿಮೆ ಆಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ಸಿದ್ದು ಕೊಣ್ಣೂರ ಅವರು ಇಂತಹ ಕ್ರೀಡೆಯನ್ನು ಆಯೋಜನೆ ಮಾಡಿ ಸ್ಥಳೀಯ ಯುವಕ, ಯುವತಿಯರಿಗೆ ಹಾಗೂ ಮಕ್ಕಳಿಗೆ ಕ್ರೀಡಾ ಉತ್ತೇಜನ ನೀಡುತ್ತಿದ್ದಾರೆ. ವಿವಿಧ ರಾಜ್ಯಗಳಿಂದ ಆಗಮಿಸಿದ ಕ್ರೀಡಾಪಟುಗಳಿಗೆ ಸ್ಥಳೀಯ ಮುಖಂಡರು ಪರಿಚಯ ಮಾಡಿಕೊಂಡು ಕ್ರೀಡೆಗೆ ಚಾಲನೆ ನೀಡಿದರು. ಪ್ರಮುಖವಾಗಿ ಈ ಪಂದ್ಯಾವಳಿಗೆ ಪಕ್ಷಾತೀತವಾಗಿ ಎಲ್ಲ ರಾಜಕೀಯ ಮುಖಂಡರು ಒಟ್ಟಾಗಿ ಭಾಗವಹಿಸಿ, ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದರು.
ಈ ಹಿಂದೆಯೂ ಸಹಾ ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದ ಜ್ಞಾನಭಾರತಿ ಕಾಲೇಜು ಆವರಣದಲ್ಲಿ ನಡೆಯುತ್ತಿದ್ದ ತಾಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟನೆಗೆ ಕುಣಿಗಲ್ ಕಾಂಗ್ರೆಸ್ ಶಾಸಕ ರಂಗನಾಥ್ ಆಗಮಿಸಿದ್ದರು. ಈ ವೇಳೆ ಮಹಿಳಾ ಕಬಡ್ಡಿ ಕ್ರೀಡಾಪಟುಗಳೊಂದಿಗೆ ಆಟವಾಡಿ ಹುರಿದುಂಬಿಸಿದ್ದರು. ಇಂತಹ ಅದೆಷ್ಟೋ ಉದಾಹರಣೆಗಳು ಹುಡುಕಿದರೆ ಸಿಗುತ್ತವೆ. ಕಾರಣ ಏನೇ ಇರಲಿ, ಆದರೆ ಉದ್ದೇಶ ಮಾತ್ರ ಮಹಿಳಾ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವುದಾಗಿದೆ.
ಇದನ್ನೂ ಓದಿ :ಜೂನಿಯರ್ ನ್ಯಾಷನಲ್ ಕಬಡ್ಡಿ ಚಾಂಪಿಯನ್ ಶಿಪ್ಗೆ ದಾವಣಗೆರೆ ಜಿತೇಂದ್ರ ಆಯ್ಕೆ