ಬಾಗಲಕೋಟೆ:ವಯೋ ನಿವೃತ್ತಿ ಹೊಂದಿರುವ ಅಧಿಕಾರಿ ಹಾಗೂ ಸಿಬ್ಬಂದಿ ಸೇರಿ 4 ಜನರಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡ ಬೀಳ್ಕೊಡುಗೆ ಸಮಾರಂಭದಲ್ಲಿ ವಯೋ ನಿವೃತ್ತಿ ಹೊಂದಿರುವ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಬಸವರಾಜ ಶಿರೂರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ರೆಡ್ಡಿ, ಗ್ರಾಮೀಣ ಕುಡಿಯುವ ನೀರು ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಲಕ್ಷ್ಮೀನಾರಾಯಣ ಹಾಗೂ ಸೈನಿಕ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಮಹಾಲಿಂಗಯ್ಯ ಬಬಲಾದಿಮಠ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ಕೆ.ರಾಜೇಂದ್ರ, ಸರ್ಕಾರಿ ಕೆಲಸಕ್ಕೆ ಸೇರಿದ ಮೇಲೆ ನಿವೃತ್ತಿ ಹೊಂದುವುದು ಸಹಜವಾಗಿದ್ದು, ಮುಂದಿನ ನಿವೃತ್ತಿ ಜೀವನ ಸುಖಮಯವಾಗಿರಲೆಂದು ಆಶಿಸಿದರು. ವಯಸ್ಕರ ಶಿಕ್ಷಣಾಧಿಕಾರಿ ಬಸವರಾಜ ಶಿರೂರ ಹೇಳಿದ ಕೆಲಸವನ್ನು ಜವಾಬ್ದಾರಿಯುತವಾಗಿ ಮಾಡುತ್ತಿದ್ದರು. ಯಾವುದೇ ಸಂದರ್ಭದಲ್ಲಿಯೂ ಸಹ ಸಕ್ರಿಯವಾಗಿ ಕಾರ್ಯನಿರ್ವಹಿಸುವ ಪ್ರವೃತ್ತಿ ಅವರದ್ದಾಗಿತ್ತು ಎಂದರು.
ಜಿ.ಪಂ ಸಿಇಒ ಟಿ.ಭೂಬಾಲನ ಮಾತನಾಡಿ ಸೇವಾ ಅವಧಿಯಲ್ಲಿ ಉತ್ತಮ ಕೆಲಸ ಮಾಡಿ ನಿವೃತ್ತಿ ಹೊಂದಿದ ತೃಪ್ತಿ ಅವರಲ್ಲಿರಬೇಕು ಎಂದು ಹೇಳಿದರು. ವಯೋ ನಿವೃತ್ತಿ ಹೊಂದಿರುವ ಅಧಿಕಾರಿ ಹಾಗೂ ಸಿಬ್ಬಂದಿಯ ಮುಂದಿನ ಜೀವನ ಸುಖಕರವಾಗಿರಲಿ ಎಂದು ಆಶಿಸಿದರು.