ಬಾಗಲಕೋಟೆ: ಬಾಗಲಕೋಟೆ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಸಿಇಒ ನಡುವೆ ಮುಸುಕಿನ ಗುದ್ದಾಟ ಪ್ರಾರಂಭವಾಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಗಂಗೂಬಾಯಿ(ಬಾಯಕ್ಕ) ಮೇಟಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಗಂಗೂಬಾಯಿ ಮಾನಕರ್ ನಡುವೆ ಮುಸುಕಿನ ಗುದ್ದಾಟ ಪ್ರಾರಂಭವಾಗಿದೆ. ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಗಂಗೂಬಾಯಿ ಮೇಟಿ ಅವರು, ಸಿಇಒ ವರ್ಗಾವಣೆ ಸಂಬಂಧ ಬಿಜೆಪಿ ಪಕ್ಷದವರ ಜೊತೆಗೆ ಕೈ ಜೋಡಿಸಿದ್ದಾರಂತೆ. ಈ ಹಿನ್ನೆಲೆ ಮುಖ್ಯಮಂತ್ರಿ ಯಡಿಯೂರಪ್ಪನವರು ಜಿಲ್ಲೆಗೆ ಆಗಮಿಸಿದ ವೇಳೆ ದೂರು ನೀಡಿದ್ದಾರೆ. ಇದರಿಂದ ಕಸಿವಿಸಿಗೊಂಡ ಸಿಇಒ ಮೌನಕ್ಕೆ ಶರಣಾಗಿದ್ದಾರೆ.
ಸಿಇಒ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಯಾವುದೇ ಕಾಮಗಾರಿಗೆ ಹಣ ಬಿಡುಗಡೆ ಮಾಡಿಲ್ಲ, ತಮ್ಮ ಸವಾರ್ಧಿಕಾರಿ ಧೋರಣೆಯಿಂದ ಕೆಲಸ ಮಾಡುತ್ತಿದ್ದು, ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಬಿಜೆಪಿ, ಕಾಂಗ್ರೆಸ್ ಪಕ್ಷದ ಸದಸ್ಯರು ಆರೋಪಿಸಿ ಸಿಎಂಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.
ಈ ಕುರಿತು ಸಿಇಒ ಗಂಗೂಬಾಯಿ ಮಾನಕರ್ ಪ್ರತಿಕ್ರಿಯಿಸಿ, ಈ ಎಲ್ಲಾ ಆರೋಪಗಳು ಸುಳ್ಳು. ಅಭಿವೃದ್ಧಿ ಕಾಮಗಾರಿಗಳು ಸರಿಯಾಗಿ ನಡೆಯುತ್ತಿವೆ. ಮಗಳ ಶಿಕ್ಷಣ ಸಲುವಾಗಿ ಕೆಎಟಿ ಮೂಲಕ ವರ್ಗಾವಣೆ ಆದೇಶವನ್ನು ತಡೆಹಿಡಿಸಲಾಗಿದೆ ಎಂದು ತಿಳಿಸಿದ್ದಾರೆ.ಮಹಿಳೆಯರಿಗೆ ಮಹಿಳೆಯರೇ ಶತ್ರು ಎನ್ನುವ ರೀತಿ ಇಬ್ಬರು ಗಂಗೂಬಾಯಿಗಳ ನಡುವೆ ಉಂಟಾಗಿರುವ ಈ ಶೀತಲ ಸಮರದಲ್ಲಿ ಯಾರಿಗೆ ಗೆಲುವು, ಯಾರಿಗೆ ಸೋಲು ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.