ಕರ್ನಾಟಕ

karnataka

ETV Bharat / state

ಬಾಗಲಕೋಟೆ: ದಾಖಲೆಯ 14 ಲಕ್ಷ ರೂಪಾಯಿಗೆ ಮಾರಾಟವಾದ ಎತ್ತು

ವರ್ಷದ ಹಿಂದೆ 5 ಲಕ್ಷಕ್ಕೆ ಖರೀದಿಸಿದ್ದ ಎತ್ತು 14 ಲಕ್ಷಕ್ಕೆ ಮಾರಾಟ - ಮುಧೋಳಿನ ರೈತ ಸಹೋದರರಿಂದ ಮಾರಾಟ

a-bull-sold-for-a-14-lakhs-in-bagalkote
ಬಾಗಲಕೋಟೆ : ದಾಖಲೆಯ 14 ಲಕ್ಷ ಮೊತ್ತಕ್ಕೆ ಮಾರಾಟವಾದ ಎತ್ತು

By

Published : Jan 28, 2023, 6:45 PM IST

Updated : Jan 28, 2023, 7:34 PM IST

ಬಾಗಲಕೋಟೆ: ರೈತರೋರ್ವರು ತಮ್ಮ ಎತ್ತನ್ನು ಬರೋಬ್ಬರಿ 14 ಲಕ್ಷಕ್ಕೆ ಮಾರಾಟ ಮಾಡಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ. ಇಲ್ಲಿನ ರೈತ ಸಹೋದರರು ಕಳೆದ ಒಂದು ವರ್ಷದ ಹಿಂದೆ ಸುಮಾರು 5 ಲಕ್ಷ ರೂಪಾಯಿಗೆ ಖರೀದಿಸಿದ ಎತ್ತು ಇಂದು ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿದೆ.

ವರ್ಷದ ಹಿಂದೆ 5 ಲಕ್ಷಕ್ಕೆ ಖರೀದಿಸಿದ ಎತ್ತು :ಜಿಲ್ಲೆಯ ಮುಧೋಳ ತಾಲೂಕಿನ ಮೆಟಗುಡ್ಡ ಹಲಕಿ ಗ್ರಾಮದ ರೈತ ಸಹೋದರರಾದ ಕಾಶಿಲಿಂಗಪ್ಪ ಗಡದಾರ ಹಾಗೂ ಯಮನಪ್ಪ ಗಡದಾರ ಎಂಬವರು ಒಂದು ವರ್ಷದ ಹಿಂದೆ 5 ಲಕ್ಷ ರೂಪಾಯಿ ಕೊಟ್ಟು ಒಂದು ಎತ್ತನ್ನು ಖರೀದಿಸಿದ್ದರು. ಮೂಡಲಗಿ ತಾಲೂಕಿನ ರಡ್ಯಾರಟ್ಟಿಯಲ್ಲಿ ಈ ಎತ್ತನ್ನು ಖರೀದಿಸಲಾಗಿತ್ತು. ಇದೀಗ ಈ ಎತ್ತನ್ನು ನಂದಗಾಂವ ಗ್ರಾಮದ ವಿಠ್ಠಲ ಎಂಬುವವರಿಗೆ ಬರೋಬ್ಬರಿ 14 ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗಿದೆ.

ಬಂಡಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ಸಾಕಷ್ಟು ಆದಾಯ ತಂದು ಕೊಡುವ ಈ ಎತ್ತುಗಳನ್ನು ರೈತರು ಮನೆ ಮಗನಂತೆ ಸಾಕುತ್ತಾರೆ. ಈ ಎತ್ತು ಕರ್ನಾಟಕ ಹಾಗೂ ಮಹಾರಾಷ್ಟ್ರದ ವಿವಿಧೆಡೆ ನಡೆದ ಬಂಡಿ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದುಕೊಂಡಿದೆ. ಇದು ಈ ವರೆಗೆ 6 ಬೈಕ್, 5 ತೊಲೆ ಚಿನ್ನ, 12 ಲಕ್ಷ ನಗದು ಬಹುಮಾನವನ್ನು ಗೆದ್ದಿದೆ. ಮಾರಾಟವಾದ ಎತ್ತನ್ನು ಗ್ರಾಮದ ನೂರಾರು ರೈತರು, ಅಭಿಮಾನಿಗಳು, ಸ್ಥಳೀಯ, ಮಹಿಳೆಯರು ಸೇರಿಕೊಂಡು ಆರತಿ ಬೆಳಗಿ ಭಾವನಾತ್ಮಕವಾಗಿ ಬೀಳ್ಕೊಟ್ಟರು.

13.5 ಲಕ್ಷಕ್ಕೆ ಮಾರಾಟವಾಗಿದ್ದ 'ರಾಜ' :ಈ ಹಿಂದೆಯೂ ಜಿಲ್ಲೆಯ ರೈತರೋರ್ವರು ತಮ್ಮ ಎತ್ತನ್ನು ದಾಖಲೆಯ ಮೊತ್ತಕ್ಕೆ ಮಾರಾಟ ಮಾಡಿ ಸುದ್ದಿಯಲ್ಲಿದ್ದರು. ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ ರೈತರೊಬ್ಬರು ತಾವು ಸಾಕಿದ್ದ ಎತ್ತನ್ನು ಸುಮಾರು 13.5 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದರು. ಅಲ್ಲದೆ ಈ ರಾಜು ಎಂಬ ಹೆಸರಿನ ಎತ್ತು ಹಲವು ಬಾರಿ ಬಂಡಿ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದುಕೊಂಡಿತ್ತು.

ನಾವಲಗಿ ಗ್ರಾಮದ ಹೊಳೆಪ್ಪ ಸಂಗಪ್ಪ ಅವರು 1 ಲಕ್ಷ ರೂಪಾಯಿಗೆ ಬೈಲಹೊಂಗಲದ ರೈತನೋರ್ವರಿಂದ ಈ ಎತ್ತನ್ನು ಖರೀದಿಸಿದ್ದರು. ಬಳಿಕ ಮುಧೋಳ ತಾಲೂಕಿನ ವಂಟಗೂಡಿ ಗ್ರಾಮದ ರೈತ ಭೀಮಶಿ ಐನಾಪುರ ಎಂಬುವರಿಗೆ 13.5 ಲಕ್ಷಕ್ಕೆ ಮಾರಾಟ ಮಾಡಿದ್ದರು. ಈ ಎತ್ತು ಬಾಗಲಕೋಟೆ, ಬೆಳಗಾವಿ ಜಿಲ್ಲೆಯಲ್ಲಿ ತೆರೆದ(ಕರ) ಬಂಡಿ ಜಗ್ಗುವ ಸ್ಪರ್ಧೆಯಲ್ಲಿ ಭಾಗವಹಿಸಿ ಅಂದಾಜು 3 ಲಕ್ಷಕ್ಕೂ ಅಧಿಕ ಹಣ ಗೆದ್ದು ತಂದಿತ್ತು.

ಇದು ಬಾಗಲಕೋಟೆ ರೈತನ ಯಶಸ್ಸಿನ ಕಥೆಯಾದರೆ, ಬೆಳಗಾವಿಯ ಗಜೇಂದ್ರ ಎಂಬ ಕೋಣವು ಮಹಾರಾಷ್ಟ್ರದ ಬೀಡ್​ ಜಿಲ್ಲೆಯಲ್ಲಿ ನಡೆಯುತ್ತಿರುವ ಕೃಷಿ ಉತ್ಸವದಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆಯುತ್ತಿದೆ. ಒಂದೂವರೆ ಟನ್ ತೂಕ ತೂಗುವ ಈ ಕೋಣವನ್ನು ನೋಡಲು ಮಹಾರಾಷ್ಟ್ರ ರೈತರ ದಂಡೇ ಸೇರುತ್ತಿದೆ. ಈ ಗಜೇಂದ್ರ ಕೋಣವನ್ನು 1.5 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡುವ ಪಂಜಾಬ್‌ ರಾಜ್ಯದ ರೈತರೊಬ್ಬರಿಂದ ಬೇಡಿಕೆ ಬಂದಿದೆ. ಆದರೂ, ನಾವು ಕೊಡುತ್ತಿಲ್ಲ ಎಂದು ಮಾಲೀಕರು ಹೇಳುತ್ತಿದ್ದಾರೆ.

ಇದನ್ನೂ ಓದಿ :ಬಂಡಿ ಸ್ಪರ್ಧೆಯ ಚಾಂಪಿಯನ್​ 'ರಾಜ' ದಾಖಲೆಯ 13.5 ಲಕ್ಷ ರೂಪಾಯಿಗೆ ಮಾರಾಟ

Last Updated : Jan 28, 2023, 7:34 PM IST

ABOUT THE AUTHOR

...view details