ಬಾಗಲಕೋಟೆ: ಕಳೆದ 2019-20 ನೇ ಸಾಲಿನಲ್ಲಿ ಮೆಕ್ಕೆ ಜೋಳ ಬೆಳೆದ ರೈತರಿಗೆ 5 ಸಾವಿರ ರೂ.ಗಳ ಆರ್ಥಿಕ ನೆರವನ್ನು ಘೋಷಿಸಲಾಗಿದ್ದು, ನೇರ ನಗದು ವರ್ಗಾವಣೆ ಮೂಲಕ ಹಣ ಜಮೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ಕೆ. ರಾಜೇಂದ್ರ ತಿಳಿಸಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಆರ್ಥಿಕ ನೆರವು ಯೋಜನೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಳೆ ಸರ್ವೇಯಲ್ಲಿ ದಾಖಲಾಗಿರುವ ಮೆಕ್ಕಜೋಳ ಬೆಳೆದ ರೈತರ ಪಟ್ಟಿ ರೈತರ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದ್ದು, ತಹಶೀಲ್ದಾರ್ ಮತ್ತು ಸಹಾಯಕ ಕೃಷಿ ನಿರ್ದೇಶಕರುಗಳಿಗೆ ಅರ್ಹ ರೈತರ ಅನುಮೋದನೆಗಾಗಿ ಲಾಗಿನ್‍ಗಳನ್ನು ನೀಡಲಾಗಿದ್ದು, ಅನುಮೋದನೆ ಕಾರ್ಯ ಚುರುಕುಗೊಳಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಮಾತನಾಡಿ, ಆರ್ಥಿಕ ನೆರವು ಪಡೆಯಲು ಗೋವಿನ ಜೋಳ ಬೆಳೆದ ರೈತ ಫಲಾನುಭವಿಗಳಿಗೆ ಜಮೀನು ಅವರ ಹೆಸರಿನಲ್ಲಿ ಇರಬೇಕು. ಜಂಟಿ ಖಾತೆ ಇದ್ದಲ್ಲಿ ಇತರೆ ಖಾತೆದಾರರ ಒಪ್ಪಿಗೆ ಪತ್ರ ಪಡೆದಿರಬೇಕು. ತಂದೆ-ತಾಯಿ ಹೆಸರಿನಲ್ಲಿ ಜಮೀನು ಇದ್ದು, ಅವರು ಮರಣ ಹೊಂದಿದ್ದಲ್ಲಿ ಮಾತ್ರ ಗ್ರಾಮ ಲೆಕ್ಕಾಧಿಕಾರಿಗಳಿಂದ ದೃಢೀಕರಿಸಿ, ಕುಟುಂಬದ ಇತರೆ ಸದಸ್ಯರಿಂದ ಒಪ್ಪಿಗೆ ಪಡೆದು ತಮ್ಮ ಹೆಸರಿನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.
ಮುಸುಕಿನ (ಗೋವಿನ) ಜೋಳ ಬೆಳೆದ ಪ್ರತಿ ರೈತರು ಒಂದು ಹಂಗಾಮಿಗೆ ಅನ್ವಯಾಗುವಂತೆ ಈ ಸೌಲಭ್ಯಕ್ಕೆ ಅರ್ಹರಿರುತ್ತಾರೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರ ಮತ್ತು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಪಡೆಯಬಹುದಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಂಗುಬಾಯಿ ಮಾನಕರ, ಡಿಸಿಸಿ ಬ್ಯಾಂಕ್ ಎಂ.ಡಿ ಎಸ್.ಎಂ. ದೇಸಾಯಿ, ಜಿಲ್ಲಾ ಅಗ್ರಣಿಯ ಬ್ಯಾಂಕ್ ವ್ಯವಸ್ಥಾಪಕ ಪಿ.ಗೋಪಾಲರೆಡ್ಡಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಗಂಗಾಧರ ದಿವಟರ ಸೇರಿದಂತೆ ಉಪ ಕೃಷಿ ನಿರ್ದೇಶಕರು, ತೋಟಗಾರಿಕೆ ಉಪ ಕೃಷಿ ನಿರ್ದೇಶಕರು ಹಾಗೂ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು ಉಪಸ್ಥಿತರಿದ್ದರು.