ಬಾಗಲಕೋಟೆ: ಭಾರತೀಯ ರೈಲ್ವೆಗೆ ಜಾಗತಿಕ ಮಟ್ಟದಲ್ಲಿ 4ನೇ ಸ್ಥಾನವಿದ್ದು, ಈ ಇಲಾಖೆಯಲ್ಲಿ ಸಾಕಷ್ಟು ಉದ್ಯೋಗವಕಾಶಗಳಿವೆ. ಕರ್ನಾಟಕದ ಯುವ ಜನತೆ ರೈಲ್ವೆ ಇಲಾಖೆಯ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಉದ್ಯೋಗ ಪಡೆದುಕೊಳ್ಳುವಂತೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಸಲಹೆ ನೀಡಿದರು.
ಭಾರತೀಯ ರೈಲ್ವೆಗೆ ಜಾಗತಿಕ ಮಟ್ಟದಲ್ಲಿ 4ನೇ ಸ್ಥಾನ: ಸಚಿವ ಸುರೇಶ್ ಅಂಗಡಿ ನಗರದ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ವತಿಯಿಂದ ಹಮ್ಮಿಕೊಂಡ ರೈಲ್ವೆ ಇಲಾಖೆಗೆ ಸಂಬಂಧಿಸಿದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದಲ್ಲಿ ರೈಲ್ವೆ ಇಲಾಖೆಗೆ ಸಂಬಂಧಿಸಿದ ಯಾವುದೇ ಕೆಲಸಗಳನ್ನು ಬಾಕಿ ಉಳಿಸದೇ 2021-22ರಲ್ಲಿ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸುವ ಉದ್ದೇಶ ಇದೆ. ಮುಂಬೈ ಹಾಗೂ ಶಿರಡಿಗೆ ಬಾದಾಮಿ ಮೂಲಕ ಸಂಚರಿಸುವ ರೈಲು ಬಾದಾಮಿಯಲ್ಲಿ ನಿಲುಗಡೆಯಾಗುತ್ತಿರಲಿಲ್ಲ. ಇದರಿಂದ ಐತಿಹಾಸಿಕ ಸ್ಥಳ ಬಾದಾಮಿ, ಪಟ್ಟದಕಲ್ಲು ಹಾಗೂ ಬನಶಂಕರಿ ದೇವಿಗೆ ಬರುವ ಪ್ರವಾಸಿಗರಿಗೆ ತೊಂದರೆ ಉಂಟಾಗುತ್ತಿತ್ತು. ನಾಳೆಯಿಂದಲೇ ಬಾದಾಮಿಯಲ್ಲಿ ರೈಲು ನಿಲುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಬೆಳಗಾವಿ, ಗೋವಾ ಮಾರ್ಗವಾಗಿ ಹೆಚ್ಚಿನ ರೈಲು ಸಂಚಾರ ಪ್ರಾರಂಭಿಸಲಾಗಿದ್ದು, ದೇಶ ವಿದೇಶಗಳಿಂದ ದೂಧ್ಸಾಗರ ವೀಕ್ಷಣೆ ಮಾಡಲು ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಏಳು ದಿನ ಸಂಚಾರ ಮಾಡುವ ರೈಲು ಪ್ರಾರಂಭಿಸಲಾಗಿದೆ. ಬೆಳಗಾವಿ-ಬೆಂಗಳೂರು, ಬಾಗಲಕೋಟೆ-ಬೆಂಗಳೂರು, ಹೂಟಗಿ ಹಾಗೂ ಕುಡಚಿ ನೂತನ ರೈಲು ಮಾರ್ಗಗಳನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು. ಇದಕ್ಕೆ ಬೇಕಾಗುವ ಜಮೀನು ಕೂಡಿಸುವುದಕ್ಕೆ ಶಾಸಕರು, ಸಂಸದರು ಪ್ರಯತ್ನ ಮಾಡಬೇಕು ಎಂದು ವಿನಂತಿಸಿಕೊಂಡಿರು.