ಬಾಗಲಕೋಟೆ:ಟ್ರ್ಯಾಕ್ಟರ್, ಟ್ರೇಲರ್ ಹಾಗೂ ಬೈಕ್ ಕಳ್ಳತನ ಮಾಡುತ್ತಿದ್ದ ನಾಲ್ವರು ಖದೀಮರನ್ನು ಬಂಧಿಸುವಲ್ಲಿ ಇಳಕಲ್ಲ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ತಿಮ್ಮಣ್ಣ ವಡ್ಡರ್, ಅಂಬರೇಶ ಮೂಲಿಮನಿ, ಅಶೋಕ ಭಂಜತ್ರಿ ಹಾಗೂ ಯಲ್ಲಪ್ಪ ವಡ್ಡರ್ ಬಂಧಿತ ಆರೋಪಿಗಳು. ಬಂಧಿತರು ಕೊಪ್ಪಳ, ಗಂಗಾವತಿ, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಟ್ರ್ಯಾಕ್ಟರ್, ಟ್ರೇಲರ್ ಹಾಗೂ ಬೈಕ್ ಕಳ್ಳತನ ಮಾಡುತ್ತಿದ್ದರು. ಬಂಧಿತರಿಂದ 29.60 ಲಕ್ಷ ಮೌಲ್ಯದ 13 ಟ್ರೇಲರ್ಗಳು, 4 ನೀರಿನ ಟ್ಯಾಂಕ್, 1 ಟ್ರ್ಯಾಕ್ಟರ್ ಇಂಜಿನ್ ಮತ್ತು 3 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
2020 ಡಿಸೆಂಬರ್ 12ರಂದು ಕರಡಿ ಗ್ರಾಮದ ಇಟಗಿ ಭೀಮವ್ವನ ಗುಡಿ ಹತ್ತಿರ ನಿಲ್ಲಿಸಿದ್ದ ಕೆಂಪು ಬಣ್ಣದ ಟ್ರ್ಯಾಕ್ಟರ್ ಟ್ರೇಲರ್ ಕಳ್ಳತನವಾಗಿತ್ತು. ಈ ಬಗ್ಗೆ ಇಳಕಲ್ಲ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಓದಿ:ಉಳ್ಳಾಲ ಯುವತಿ ಆತ್ಮಹತ್ಯೆ ಪ್ರಕರಣ: ಮೂರು ಗೆಳೆಯರು ಪೊಲೀಸ್ ವಶಕ್ಕೆ
ಕಳೆದ ಎರಡು ದಿನಗಳ ಹಿಂದೆ ಟ್ರ್ಯಾಕ್ಟರ್ ಟ್ರೇಲರ್ ಸಾಗಿಸುವಾಗ ಖದೀಮರು ಪೊಲೀಸರ ಕಣ್ಣಿಗೆ ಬಿದ್ದಿದ್ದು, ಕಂಬಿ ಎಣಿಸುವಂತೆ ಮಾಡಿದ್ದಾರೆ. ಇಳಕಲ್ಲ ಗ್ರಾಮೀಣ ಪಿಎಸ್ಐ ಬಸವರಾಜ ತಿಪ್ಪಾರೆಡ್ಡಿ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, ಇವರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಸಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.