ಬಾಗಲಕೋಟೆ: ಮಳೆ, ಪ್ರವಾಹದಿಂದ ರಾಜ್ಯದಲ್ಲಿ 25 ಸಾವಿರ ರೂ. ಕೋಟಿಯಷ್ಟು ನಷ್ಟ ಉಂಟಾಗಿದೆ ಎಂದು ಪ್ರಾಥಮಿಕ ವರದಿ ನೀಡಿದ್ದೇವೆ. ಕೇಂದ್ರ ಸರ್ಕಾರದಿಂದ ನೆರವು ಸಿಗಬೇಕಾಗಿದೆ, ಸಿಗುತ್ತೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಅವರು, ಕೇಂದ್ರ ಸರ್ಕಾರ ಎನ್ಡಿಆರ್ಎಫ್, ಎಸ್ಡಿಆರ್ಎಫ್ ನಿಯಮಗಳ ಪ್ರಕಾರ ಹಣ ಬಿಡುಗಡೆ ಮಾಡುತ್ತೆ. ಅಷ್ಟೂ ಹಣವನ್ನು ಕೇಂದ್ರ ಸರ್ಕಾರ ನಿಯಮಾವಳಿ ಪ್ರಕಾರ ಕೊಡುತ್ತದೆ ಎಂದರು.
ಕೋವಿಡ್ ಲಸಿಕೆಗೆ ಕೇಂದ್ರ ಸರ್ಕಾರದ ಸಿದ್ಧತೆ ವಿಚಾರವಾಗಿ ಮಾತನಾಡಿದ ಅವರು, ಜನವರಿ ಸಮಯಕ್ಕೆ ಕೋವಿಡ್ ವ್ಯಾಕ್ಸಿನ್ ಬರುವ ನಿರೀಕ್ಷೆ ಇದೆ. ಪ್ರತಿಯೊಬ್ಬರಿಗೂ ಮುಟ್ಟಿಸುವ ಕಾರ್ಯ ಕೇಂದ್ರ ಸರ್ಕಾರ ಮಾಡುತ್ತದೆ ಎಂದರು.
ಪಟಾಕಿ ನಿಷೇಧ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿ, ಪಟಾಕಿ ಸಿಡಿಸುವುದರಿಂದ ಕೋವಿಡ್ ರೋಗಿಗಳಿಗೆ, ಗುಣಮುಖ ಆದವ್ರಿಗೆ ತೊಂದರೆ ಆಗುತ್ತದೆ. ಪಟಾಕಿಯಲ್ಲಿ ವಿಷ ಅನಿಲ ಇರುತ್ತೆ ಅನ್ನೋ ತಜ್ಞರ ವರದಿ ಇದೆ. ಹಾಗಾಗಿ ಪಟಾಕಿ ಹಾರಿಸುವುದನ್ನು ಈ ವರ್ಷ ಬ್ಯಾನ್ ಮಾಡಲಾಗಿದೆ. ಜನ ಇದಕ್ಕೆ ಸಹಕರಿಸಬೇಕು. ಸಣ್ಣಪುಟ್ಟ ಹಸಿರು ಪಟಾಕಿ ಅಂತ ಹೇಳಿದ್ದಾರೆ, ಅದು ಯಾವ ರೀತಿ ಉಪಯೋಗ ಆಗುತ್ತೆ ನೋಡೋಣ ಎಂದರು.