ಬಾಗಲಕೋಟೆ: ಜಿಲ್ಲೆಯ ಉಪ ವಿಭಾಗ ವ್ಯಾಪ್ತಿಯಲ್ಲಿ ಮದುವೆ ಕಾರ್ಯದಲ್ಲಿ ಸರ್ಕಾರ ಹೊರಡಿಸಿದ ಮಾರ್ಗಸೂಚಿ ಉಲ್ಲಂಘನೆಯಡಿ ಒಟ್ಟು 13 ಪ್ರಕರಣಗಳನ್ನು ದಾಖಲಿಸಿರುವುದಾಗಿ ಬಾಗಲಕೋಟೆ ಉಪ ವಿಭಾಗಾಧಿಕಾರಿ ಎಂ.ಗಂಗಪ್ಪ ತಿಳಿಸಿದ್ದಾರೆ.
ಸರ್ಕಾರ ಕೊರೊನಾ ಸಾಂಕ್ರಾಮಿಕ ರೋಗ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಮದುವೆ ಕಾರ್ಯಕ್ರಮಕ್ಕೆ 50 ಜನರಿಗೆ ಅವಕಾಶ ಕಲ್ಪಿಸಿದೆ. ಅಲ್ಲದೆ ಸ್ಥಳೀಯ ಪೊಲೀಸ್ ಠಾಣೆ, ನಗರ ಮತ್ತು ಗ್ರಾಮೀಣ ಮಟ್ಟದ ಅಧಿಕಾರಿಗಳಿಂದ ಎನ್.ಓ.ಸಿ ಹಾಗೂ ಉಪ ವಿಭಾಗಾಧಿಕಾರಿಗಳಿಂದ ಷರತ್ತಿಗೆ ಒಳಪಟ್ಟು ಅನುಮತಿ ಪತ್ರ ಹಾಗೂ 50 ಪಾಸ್ಗಳನ್ನು ನೀಡಲಾಗಿತ್ತು. ಆದರೂ ಸಹ ಮದುವೆ ಆಯೋಜನೆ ಮಾಡಲಾಗಿದ್ದು, ನಿಯಮ ಉಲ್ಲಂಘನೆಯಾದ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯ ಬಾಗಲಕೋಟೆ, ಬಾದಾಮಿ, ಗುಳೇದಗುಡ್ಡ, ಹುನಗುಂದ ಹಾಗೂ ಇಳಕಲ್ ತಾಲೂಕಿನ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಏಪ್ರಿಲ್ 26 ಮತ್ತು 27ರಂದು ನಡೆದ ಮದುವೆಗಳಲ್ಲಿ ನಿಮಯ ಉಲ್ಲಂಘಿಸಿದ 13 ಮದುವೆ ಆಯೋಜಕರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಬಾದಾಮಿ ತಾಲೂಕಿನ ಹೂಲಗೇರಿ ಗ್ರಾಮದಲ್ಲಿ ಗ್ರಾಪಂನಿಂದ ಎನ್.ಓ.ಸಿ ಪಡೆದು ಉಪ ವಿಭಾಗಾಧಿಕಾರಿಗಳಿಂದ ಅನುಮತಿ ಪತ್ರ ಹಾಗೂ ಪಾಸ್ ಪಡೆಯದೆ 50ಕ್ಕಿಂತ ಹೆಚ್ಚಿನ ಜನ ಸೇರಿರುವುದು, ಜಮ್ಮನಕಟ್ಟಿ ಗ್ರಾಮದಲ್ಲಿ ನಿಮಯ ಮೀರಿ ಹೆಚ್ಚಿನ ಜನ ಸೇರಿರುವುದು ಸೇರಿದಂತೆ ಅನುಮತಿ ಪತ್ರದಲ್ಲಿ ತಿಳಿಸಿರುವ ಷರತ್ತುಗಳ ಉಲ್ಲಂಘನೆಯಡಿ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಮದುವೆ ಆಯೋಜಕರು ಅನುಮತಿ ಪತ್ರದಲ್ಲಿ ತಿಳಿಸಿರುವ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮದುವೆ ಕಾರ್ಯದಲ್ಲಿ ಕೆಲಸ ಮಾಡುವವರು ಸೇರಿದಂತೆ 50ಕ್ಕೂ ಹೆಚ್ಚು ಜನ ಸೇರುವಂತಿಲ್ಲ. ನಿಯಮ ಉಲ್ಲಂಘಿಸಿದಲ್ಲಿ ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲಿಸಲಾಗುತ್ತದೆ. ಆದ್ದರಿಂದ ಸಾರ್ವಜನಿಕರು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಕೊರೊನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಸಹಕರಿಸುವಂತೆ ಉಪ ವಿಭಾಗಾಧಿಕಾರಿಗಳು ಕೋರಿದ್ದಾರೆ.
ಇದನ್ನೂ ಓದಿ:ಜನರ ಸಮಸ್ಯೆಗೆ ಸ್ಪಂದಿಸದ ಜನ ನಾಯಕರು: ಬರೀ ಪರ- ವಿರೋಧದ ಹೇಳಿಕೆಯಲ್ಲೇ ಮಗ್ನ