ಬಾಗಲಕೋಟೆ:ಕಾಳದಂಧೆಯಲ್ಲಿ ರೆಮ್ಡಿಸಿವಿರ್ ಇಂಜೆಕ್ಷನ್ ಮಾರಾಟ ಮಾಡುತ್ತಿದ್ದ 10 ಜನರನ್ನು ನಗರದ ಪೊಲೀಸರು ಬಂಧಿಸಿದ್ದಾರೆ. ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಮೂವರು ಹಾಗೂ ಖಾಸಗಿ ಆಸ್ಪತ್ರೆಯ ಏಳು ಜನ ಸಿಬ್ಬಂದಿ ಬಂಧಿಸಲಾಗಿದೆ ಎಂದು ಎಸ್‌ಪಿ ಲೋಕೇಶ್ ಜಗಲಸಾರ ತಿಳಿಸಿದ್ದಾರೆ.
ದುಬಾರಿ ಹಣಕ್ಕೆ ರೆಮ್ಡೆಸಿವಿರ್ ಇಂಜೆಕ್ಷನ್ ಮಾರಾಟ ಮಾಡುತ್ತಿದ್ದ ಜಾಲ ಪತ್ತೆ; 10 ಆರೋಪಿಗಳ ಬಂಧನ - ಬಾಗಲಕೋಟೆ ರೆಮ್ಡಿಸಿವಿರ್ ಮಾರಾಟ ಪ್ರಕರಣ
ರೆಮ್ಡಿ ಸಿವಿರ್ ಇಂಜೆಕ್ಷನ್ ಕೊರತೆ ಮಧ್ಯೆ ಇದನ್ನು ಕದ್ದು ಮಾರಾಟ ಮಾಡುವ ಜಾಲ ಪತ್ತೆಯಾಗಿದೆ. ದುಬಾರಿ ಹಣಕ್ಕೆ ಮಾರಾಟ ಮಾಡುತ್ತಿದ್ದಾಗ ದಾಳಿ ಮಾಡಿದ ನಗರದ ಪೊಲೀಸರು ಪಾಲು ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ.
ಕೋವಿಡ್ ಆಸ್ಪತ್ರೆಯ ವಿಠ್ಠಲ ಚಲವಾದಿ, ರಂಗಪ್ಪ ದಿನ್ನಿ, ರಾಹುಲ್ ಗುಡಿಮನಿ ಹಾಗೂ ಖಾಸಗಿ ಆಸ್ಪತ್ರೆಯ ತಿಮ್ಮಣ್ಣ ಗಡದನ್ನವರ, ಬಾಲಚಂದ್ರ ಭಜಂತ್ರಿ, ಮಂಜುನಾಥ ಗಾಣಿಗೇರ, ಶ್ರೀಕಾಂತ್ ಲಮಾಣಿ, ಗಣೇಶ್ ನಾಟಕಾರ್, ಪ್ರವೀಣ ಕೋತ್ಲಿ, ಮಹಾಂತಗೌಡ ಬಿರಾದಾರ್ ಬಂಧಿತ ಆರೋಪಿಗಳಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಸಿಗುವ ಔಷಧವನ್ನು 25 ರಿಂದ -30 ಸಾವಿರಕ್ಕೆ ಮಾರಾಟ ಮಾಡುವ ವೇಳೆ ದಾಳಿ ಮಾಡಿ ಔಷಧ ಸಮೇತ ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದರು.
ಯಾವುದೇ ಕಾರಣಕ್ಕೂ ಜಾಲದಲ್ಲಿ ಸಿಕ್ಕವರನ್ನು ಬಿಡುವುದಿಲ್ಲ. ಯಾರೇ ಆಗಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.