ಬಾಗಲಕೋಟೆ: ರಾಜ್ಯದ ಪ್ರವಾಹ ಸ್ಥಿತಿ ಎದುರಿಸಲು ಸರ್ಕಾರ ನೂರು ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡಿದೆ. ಅದರಲ್ಲಿ ಹತ್ತು ಕೋಟಿ ಹಣವನ್ನು ಬಾಗಲಕೋಟೆ ಜಿಲ್ಲೆಗೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಡಿಯೂರಪ್ಪ ಹೇಳಿದ್ದಾರೆ.
ಮುಧೋಳ ಪಟ್ಟಣದಲ್ಲಿರುವ ಮಾಜಿ ಸಚಿವ ಮುರುಗೇಶ ನಿರಾಣಿ ಅವರ ಮನೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ, ಬಾಗಲಕೋಟೆ ಜಿಲ್ಲೆಯಲ್ಲಿ 63 ಗ್ರಾಮಗಳು ಜಲಾವೃತ್ತವಾಗಿವೆ. 6,381 ಕುಟುಂಬಗಳ ಸ್ಥಳಾಂತರ ಮಾಡಲಾಗಿದೆ. 28,126 ಜನರನ್ನು ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಲಾಗಿದೆ. 42 ಪರಿಹಾರ ಕೇಂದ್ರ ತೆರೆಯಲಾಗಿದ್ದು, 92 ತಾತ್ಕಾಲಿಕ ಆರೋಗ್ಯ ಕೇಂದ್ರ ಕಾರ್ಯನಿರ್ವಹಿಸುತ್ತಿವೆ. ಇನ್ಫೋಸಿಸ್ ಪ್ರತಿಷ್ಠಾನದ ಡಾ. ಸುಧಾಮೂರ್ತಿ ಅವರು 10 ಕೋಟಿ, ನಿರಾಣಿ ಅವರು ನೀಡಿದ ಒಂದು ಕೋಟಿ ಹಾಗೂ ಕೆಎಂಎಫ್ನವರು ಕೂಡ ಒಂದು ಕೋಟಿ ರೂ. ಪರಿಹಾರ ಧನ ನೀಡಲು ಮುಂದಾಗಿದ್ದಾರೆ ಎಂದು ಇದೇ ವೇಳೆ ಸಿಎಂ ತಿಳಿಸಿದ್ರು.