ಟೋಕಿಯೋ: ಉದಯೋನ್ಮುಖ ಕುಸ್ತಿಪಟು ರವಿ ಕುಮಾರ್ ದಹಿಯಾ 57 ಕೆಜಿ ವಿಭಾಗದ ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಭಾರತಕ್ಕೆ 2020ರ ಒಲಿಂಪಿಕ್ಸ್ ಕೂಟದಲ್ಲಿ 4ನೇ ಪದಕ ಖಚಿಪಡಿಸಿದ್ದಾರೆ.
ಬುಧವಾರ ನಡೆದ ಪುರುಷರ 57 ಕೆ.ಜಿ. ಫ್ರಿಸ್ಟೈಲ್ ವಿಭಾಗದ ಸೆಮಿಫೈನಲ್ ಮುಖಾಮುಖಿಯಲ್ಲಿ ರವಿಕುಮಾರ್ ಕಜಕಸ್ತಾನದ ನುರಿಸ್ಲಾಮ್ ಸನಾಯೆವ್ ವಿರುದ್ಧ ಗೆಲುವು ದಾಖಲಿಸಿದರು. ಒಂದು ಹಂತದಲ್ಲಿ 7-9ರಲ್ಲಿ ಹಿನ್ನಡೆ ಅನುಭವಿಸಿದ್ದ ರವಿ ಎದುರಾಳಿಯನ್ನು ಕೆಳಗೆ(ಫಾಲ್) ಬೀಳಿಸುವ ಮೂಲಕ ಜಯ ತಮ್ಮದಾಗಿಸಿಕೊಂಡರು.
ಈ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲೇ ಪದಕ ತಂದುಕೊಡುತ್ತಿರುವ ದೇಶದ ಐದನೇ ಭಾರತೀಯ ಕುಸ್ತಿಪಟು ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ. 1952ರಲ್ಲಿ ಕೆ.ಡಿ ಜಾಧವ್, ಸುಶೀಲ್ ಕುಮಾರ್(2008 ಮತ್ತು 2012), ಯೋಗೇಶ್ವರ್ ದತ್(2012) ಮತ್ತು ಸಾಕ್ಷಿ ಮಲಿಕ್(2016)ರಲ್ಲಿ ಭಾರತಕ್ಕೆ ಪದಕ ತಂದುಕೊಟ್ಟಿದ್ದರು. ಅಲ್ಲದೇ ಸುಶೀಲ್ ಕುಮಾರ್ ನಂತರ ಫೈನಲ್ ತಲುಪಿದ 2ನೇ ಕುಸ್ತಿಪಟು ಎಂಬ ಕೀರ್ತಿಗೆ ಪಾತ್ರರಾದರು.