ಅಮೃತಸರ: ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ನಾಲ್ಕು ದಶಕಗಳ ನಂತರ ಹಾಕಿಯಲ್ಲಿ ಪದಕ ತಂದುಕೊಟ್ಟ ಟೀಮ್ ಇಂಡಿಯಾದ ನಾಯಕ ಮನ್ಪ್ರೀತ್ ಸಿಂಗ್ ತಮ್ಮೆಲ್ಲಾ ಶ್ರೇಯವನ್ನು ಅವರ ತಾಯಿಗೆ ಅರ್ಪಿಸಿದ್ದಾರೆ. ಜೊತೆಗೆ ತಮ್ಮ ತಾಯಿಯ ಮುಖದಲ್ಲಿನ ನಗು ಇದ್ದರೆ ತಮ್ಮ ಮುಖದಲ್ಲೂ ಸದಾ ನಗುವಿರುತ್ತದೆ ಎಂದು ಹೇಳಿದ್ದಾರೆ.
ಲೀಗ್ನಲ್ಲಿ 2ನೇ ಸ್ಥಾನಿಯಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ಭಾರತ ತಂಡ 8ರ ಘಟ್ಟದಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ 3-1ರಲ್ಲಿ ಗೆಲುವು ಸಾಧಿಸಿ ಸೆಮಿಫೈನಲ್ಗೆ ತೇರ್ಗಡೆಗೊಂಡಿತ್ತು. ಆದರೆ, ಸೆಮಿಫೈನಲ್ನಲ್ಲಿ ಬೆಲ್ಜಿಯಂ ವಿರುದ್ಧ 5-2ರಲ್ಲಿ ಸೋಲು ಕಂಡು ನಿರಾಸೆಯನುಭವಿಸಿದ್ದ ಟೀಮ್ ಇಂಡಿಯಾ ಕಂಚಿನ ಪದಕದ ಪಂದ್ಯದಲ್ಲಿ ಜರ್ಮನಿ ಬಗ್ಗುಬಡಿದು ಪದಕಕ್ಕೆ ಮುತ್ತಿಕ್ಕಿತ್ತು.
"ಅವರ(ತಾಯಿ) ಮುಗುಳ್ನಗೆಯನ್ನು ನೋಡಿದಾಗ ಮತ್ತು ಅವರು ನನ್ನ ಬಗ್ಗೆ ಎಷ್ಟು ಹೆಮ್ಮೆಪಡುತ್ತಾರೆ ಎಂದು ತಿಳಿದಾಗ ನನ್ನ ಮುಖದಲ್ಲಿ ಒಂದು ನಗುಮೂಡುತ್ತದೆ. ಅವರಿಲ್ಲದೇ ನಾನು ಇಂದು ಇಲ್ಲಿರುತ್ತಿರಲಿಲ್ಲ #loveyoumama, " ಎಂದು ಟ್ವಿಟರ್ನಲ್ಲಿ ಮನ್ಪ್ರೀತ್ ಸಿಂಗ್ ತನ್ನ ತಾಯಿಯೊಂದಿಗಿನ ಹೃದಯಸ್ಪರ್ಶಿ ಫೋಟೋವನ್ನು ಹಂಚಿಕೊಂಡಿದ್ದಾರೆ.
ಬುಧವಾರ ದೆಹಲಿಯಿಂದ ಆಗಮಿಸಿದ ಪುರುಷ ಮತ್ತು ಮಹಿಳೆಯರ ಹಾಕಿ ತಂಡವನ್ನು ಅಮೃತಸರದಲ್ಲಿ ಪಂಜಾಬ್ ಸರ್ಕಾರ ಅದ್ಧೂರಿಯಾಗಿ ಬರಮಾಡಿಕೊಂಡಿತು. ಟೋಕಿಯೋ ಒಲಿಂಪಿಕ್ಸ್ನಲ್ಲಿ ಕಂಚು ಗೆಲ್ಲುವ ಮೂಲಕ ಭಾರತ ಹಾಕಿ ತಂಡ 41 ವರ್ಷಗಳ ಪದಕದ ಬರವನ್ನು ನೀಗಿಸಿದ್ದರು. ಈ ಮೂಲಕ ಹಾಕಿ ಶ್ರೇಯಾಂಕದಲ್ಲಿ 3ನೇ ಸ್ಥಾನಕ್ಕೇರಿತ್ತು.
ಇದನ್ನು ಓದಿ:ಆ.24ರಿಂದ ಪ್ಯಾರಾಲಿಂಪಿಕ್ಸ್: 54 ಸದಸ್ಯರ ಭಾರತ ತಂಡಕ್ಕೆ ಹೃದಯಸ್ಪರ್ಶಿ ಬೀಳ್ಕೊಡುಗೆ