ನವದೆಹಲಿ :ಒಬ್ಬ ಕ್ರೀಡಾಪಟುವಿಗೆ ತನ್ನ ವೃತ್ತಿ ಜೀವನದಲ್ಲಿ ಸೋಲು ಅನ್ನೋದು ಸಾಮಾನ್ಯ. ಹಾಗೆಯೇ ಕೆಲವರಿಗೆ ಅಪರೂಪ. ಟೋಕಿಯೋ ಒಲಿಂಪಿಕ್ಸ್ನಲ್ಲಿ ನಡೆದ ಬಾಕ್ಸಿಂಗ್ನಲ್ಲಿ ಭಾರತೀಯ ಬಾಕ್ಸರ್ ಸತೀಶ್ ಕುಮಾರ್, ವಿಶ್ವ ಚಾಂಪಿಯನ್ ವಿರುದ್ಧ ತಿಂದಿರುವ ಹೊಡೆತಗಳಿಗೆ ಮುಖಕ್ಕೆ 13 ಹೊಲಿಗೆಗಳನ್ನು ಹಾಕಿಸಿಕೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ನಲ್ಲಿ ನಾನು ಸೋತರೂ, ಜನ ನನ್ನನ್ನು ಗೆದ್ದಂತೆ ಅಭಿನಂದಿಸುತ್ತಿದ್ದಾರೆ. ನನ್ನ ಮುಖಕ್ಕೆ ತುಂಬಾ ಪೆಟ್ಟು ಬಿದ್ದಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಭಾರತದ ಹೆಮ್ಮೆಯ ಸೈನಿಕ ಹಾಗೂ ಬಾಕ್ಸರ್ ಸತೀಶ್ ಕುಮಾರ್ (32) ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಸತೀಶ್ ಹಣೆ ಮತ್ತು ಗಲ್ಲಕ್ಕೆ ತೀವ್ರ ಪೆಟ್ಟು ಬಿದ್ದಿತು. ಆದರೂ, ಉಜ್ಬೇಕಿಸ್ತಾನದ ಬಖೋದಿರ್ ಜಲೋವ್ ವಿರುದ್ಧ ಸೆಣಸಾಡಿದರು. ನನ್ನ ಗಲ್ಲಕ್ಕೆ ಏಳು ಹೊಲಿಗೆ, ಹಣೆಗೆ ಆರು ಹೊಲಿಗೆಗಳನ್ನು ಹಾಕಲಾಗಿದೆ. ಸಾಧ್ಯವಾದಷ್ಟು ನಾನು ಅತ್ಯುತ್ತಮವಾಗಿ ಆಡಿದ್ದೇನೆ.
ನನಗೆ ಇಬ್ಬರು ಮಕ್ಕಳಿದ್ದು, ನನ್ನ ಹೆಂಡತಿ ಈ ಬಾಕ್ಸಿಂಗ್‌ಗೆ ಹೋಗುವುದು ಬೇಡ ಎಂದು ಹೇಳಿದ್ದಳು. ನನ್ನ ತಂದೆ ಕೂಡ ಈ ಆಟದಿಂದ ನೋವು ಜಾಸ್ತಿ ಹೋಗಬೇಡ ಎಂದಿದ್ದರು. ಆದರೂ, ನಾನು ಟೋಕಿಯೋ ಒಲಿಂಪಿಕ್ಸ್ನಲ್ಲಿ ದೇಶವನ್ನು ಪ್ರತಿನಿಧಿಸಿದೆ ಎಂದರು.