ಟೋಕಿಯೋ: 2016ರ ರಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದಿದ್ದ ಭಾರತದ ಹೈಜಂಪರ್ ಮರಿಯಪ್ಪನ್ ತಂಗವೇಲು ಈ ಬಾರಿ ಬೆಳ್ಳಿಗೆ ತೃಪ್ತಿಪಟ್ಟಿದ್ದಾರೆ. ಆದರೆ, ತಾವೂ ಚಿನ್ನ ಗೆಲ್ಲಲು ಸಾಧ್ಯವಾಗದ್ದಕ್ಕೆ ಫೈನಲ್ಸ್ ವೇಳೆ ಸುರಿದ ಮಳೆ ಕಾರಣ ಎಂದು ತಿಳಿಸಿದ್ದಾರೆ.
ಮಂಗಳವಾರ ನಡೆದ ಫೈನಲ್ಸ್ನಲ್ಲಿ ತಂಗವೇಲು 1.86 ಮೀಟರ್ ಎತ್ತರವನ್ನು ಯಶಸ್ವಿಯಾಗಿ ಜಿಗಿದರು. ಆದರೆ 1.88 ಮೀಟರ್ ಎತ್ತರವನ್ನು ಜಿಗಿಯುವಲ್ಲಿ ವಿಫಲರಾದರು. ಅಮೆರಿಕಾದ ಸ್ಯಾಮ್ ಗ್ರೇವ್ ಯಶಸ್ವಿಯಾಗಿ ಜಿಗಿದು ಚಿನ್ನ ಗಿಟ್ಟಿಸಿಕೊಂಡರು. ಆದರೆ, ಮಳೆ ಬರದಿದ್ದರೆ ತಾವೂ 1.90 ಮೀಟರ್ ಎತ್ತರವನ್ನು ಜಿಗಿಯುತ್ತಿದ್ದೆ, ತಾವೂ ಬಲಗಾಲು(ಊನಾವಾಗಿರುವ) ಮಳೆಗೆ ತೇವವಾಗಿದ್ದರಿಂದ ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.
ಫೈನಲ್ಸ್ ಆರಂಭವಾದ ವೇಳೆ ತುಂತುರು ಮಳೆ ಆರಂಭವಾಗಿತ್ತು. ಇದೇನು ನನಗೆ ಹೆಚ್ಚು ಸಮಸ್ಯೆ ಮಾಡಲಿಲ್ಲ. ಆದರೆ ನಾನು 1.80 ಮೀಟರ್ ಜಿಗಿಯುವಲ್ಲಿ ಯಶಸ್ವಿಯಾದ ಬಳಿಕ ಮಳೆ ಜೋರಾಯಿತು. ಆ ನಂತರ ಅಲ್ಲಿ ಪರಿಸ್ಥಿತಿ ನನ್ನ ಪಾಲಿಗೆ ಕೆಟ್ಟದಾಯಿತು. ನನ್ನ ಸಾಕ್ಸ್ ಒದ್ದೆಯಾಯಿತು. ಅದು ನಾನು ಜಿಗಿಯುವ ವೇಳೆ ತೊಂದರೆಯನ್ನುಂಟು ಮಾಡಿತು ಎಂದು ತಾವೂ ಮೂರು ಪ್ರಯತ್ನದಲ್ಲೂ 1.88 ಮೀಟರ್ ಜಿಗಿಯಲು ವಿಫಲರಾಗಿದ್ದಕ್ಕೆ ಕಾರಣವನ್ನು ತಿಳಿಸಿದ್ದಾರೆ.