ಟೋಕಿಯೋ:ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಮಹಿಳಾ ಹಾಕಿ ತಂಡದ ನೀರಸ ಪ್ರದರ್ಶನ ಮುಂದುವರೆದಿದೆ. ಈಗಾಗಲೇ ತಾವಾಡಿದ್ದ ಮೊದಲ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಸೋಲು ಕಂಡಿದ್ದ ಹಾಕಿ ತಂಡ ಎರಡನೇ ಪಂದ್ಯದಲ್ಲಿ ಸೋಲು ಅನುಭವಿಸಿದೆ.
ಜರ್ಮನಿ ವಿರುದ್ಧ ನಡೆದ ಗ್ರೂಪ್ ಹಂತದ ಎರಡನೇ ಪಂದ್ಯದಲ್ಲಿ 0-2 ಗೋಲುಗಳ ಅಂತರದಿಂದ ಸೋಲು ಕಂಡಿದೆ. ಕಳೆದ ಎರಡು ದಿನಗಳ ಹಿಂದೆ ನೆದರ್ಲೆಂಡ್ಸ್ ವಿರುದ್ಧ 5-1 ಅಂತರದಲ್ಲಿ ಸೋಲು ಕಂಡು ನಿರಾಸೆಗೊಳಗಾಗಿದ್ದ ಭಾರತ, ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಇರಾದೆ ಇಟ್ಟುಕೊಂಡಿತ್ತು. ಆದರೆ ಮತ್ತೊಂದು ಪಂದ್ಯದಲ್ಲಿ ಸೋಲು ಕಂಡಿರುವುದು ತಂಡದ ಮನೋಬಲ ಮತ್ತಷ್ಟು ಕುಗ್ಗಿಸಿದೆ.
ಇದನ್ನೂ ಓದಿ: ಮಗುವಿನ ಮೈಮೇಲೆ ಹರಿಯಿತು ಕಾರು: ಚಾಲಕನ ನಿರ್ಲಕ್ಷ್ಯಕ್ಕೆ ಪುಟ್ಟ ಕಂದಮ್ಮ ಬಲಿ
ಭಾರತ ಮಹಿಳಾ ತಂಡ ಜುಲೈ 28ರಂದು ಗ್ರೇಟ್ ಬ್ರಿಟನ್, ಜುಲೈ 30ರಂದು ಐರ್ಲೆಂಡ್ ಮತ್ತು ಜುಲೈ 31ರಂದು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಪುರುಷರ ಹಾಕಿ ತಂಡ ಕೂಡ ಈಗಾಗಲೇ ತಾನು ಆಡಿರುವ ಎರಡು ಪಂದ್ಯಗಳ ಪೈಕಿ ಒಂದರಲ್ಲಿ ಗೆದ್ದು ಮತ್ತೊಂದು ಪಂದ್ಯದಲ್ಲಿ ಸೋಲು ಕಂಡಿದೆ. ಇದೀಗ ಸ್ಪೇನ್ ವಿರುದ್ಧ ಸೆಣಸಾಟ ನಡೆಸಲಿದೆ.
ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತ ಒಂದು ಬೆಳ್ಳಿ ಪದಕ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ 32ನೇ ಸ್ಥಾನದಲ್ಲಿದ್ದು, ಅತಿ ಹೆಚ್ಚು(8 ಚಿನ್ನ, 3 ಬೆಳ್ಳಿ ಹಾಗೂ 3 ಕಂಚು) 14 ಪದಕ ಗೆದ್ದಿರುವ ಜಪಾನ್ ಮೊದಲನೇ ಸ್ಥಾನದಲ್ಲಿದೆ.