ಟೋಕಿಯೋ :ಟೋಕಿಯೋ ಒಲಿಂಪಿಕ್ಸ್ನ 10ನೇ ದಿನ ಇಂದು ನಡೆದ ಮಹಿಳೆಯರ ಸಿಂಗಲ್ಸ್ನ ಸೆಮಿಫೈನಲ್ನಲ್ಲಿ ತೈ ಜು ಯಿಂಗ್ ವಿರುದ್ಧ ಭಾರತದ ಭರವಸೆಯ ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು ಸೋಲುಂಡಿದ್ದಾರೆ. ಸೆಮಿಫೈನಲ್ನಲ್ಲಿ ಸೋಲು ಕಂಡಿರುವ ಕಾರಣ ಇದೀಗ ಪಿವಿ ಸಿಂಧು ಕಂಚಿನ ಪದಕಕ್ಕಾಗಿ ಚೀನಾದ ಆಟಗಾರ್ತಿ ವಿರುದ್ಧ ಹೋರಾಟ ನಡೆಸಲಿದ್ದಾರೆ.
11ನೇ ದಿನ ಭಾರತದ ಅಭಿಯಾನ :
ಸತೀಶ್ ಕುಮಾರ್ - ಬಾಕ್ಸಿಂಗ್
ಭಾರತದ ಬಾಕ್ಸರ್ ಸತೀಶ್ ಕುಮಾರ್ ಅವರು ಬಾಕ್ಸಿಂಗ್ (91 ಕೆಜಿ) ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶ ಮಾಡುವುದರ ಮೂಲಕ ತಮ್ಮ ಮೊದಲನೇ ಒಲಿಂಪಿಕ್ಸ್ನಲ್ಲಿಯೇ ಸದ್ದು ಮಾಡುತ್ತಿದ್ದಾರೆ. ಗುರುವಾರ ನಡೆದ ಪಂದ್ಯದಲ್ಲಿ ಜಮೈಕಾದ ರಿಕಾರ್ಡೊ ಬ್ರೌನ್ ಅವರನ್ನು 4-1 ಅಂತರದಿಂದ ಸೋಲಿಸುವ ಮೂಲಕ ಭಾರತದ ಬಾಕ್ಸರ್ ಸತೀಶ್ ಕುಮಾರ್ ಅವರು 91 ಕೆಜಿ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ನಾಳೆ ಸತೀಶ್ ಉಜ್ಬೇಕಿಸ್ತಾನದ ಬಖೋಡಿರ್ ಜಲೋವ್ ಅವರನ್ನು ಎದುರಿಸಲಿದ್ದಾರೆ. ಈ ಪಂದ್ಯ ಗೆದ್ದರೆ ಭಾರತಕ್ಕೆ ಮತ್ತೊಂದು ಪದಕ ಖಚಿತವಾಗಲಿದೆ.