ಟೋಕಿಯೊ :ಭಾರತಕ್ಕೆ ಸೋಮವಾರ ಪದಕಗಳ ಸುರಮಳೆ ಮುಂದುವರಿದಿದೆ. ಪುರುಷರ F64 ಜಾವಲಿನ್ ಥ್ರೋ ವಿಭಾಗದಲ್ಲಿ ಸುಮಿತ್ ಅಂತಿಲ್ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದಾರೆ.
ಇಂದು ನಡೆದ ಫೈನಲ್ಸ್ನಲ್ಲಿ ಸುಮಿತ್ 68.55ಮೀಟರ್ ಎಸೆಯುವ ಮೂಲಕ ಭಾರತಕ್ಕೆ 2020 ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ 2ನೇ ಚಿನ್ನದ ಪದಕ ತಂದು ಕೊಟ್ಟಿದ್ದಾರೆ. ಸುಮಿತ್ ತಮ್ಮ ಫೈನಲ್ಸ್ನಲ್ಲಿ ಮೂರು ಬಾರಿ ವಿಶ್ವ ದಾಖಲೆ ಮುರಿದರು. ಮೊದಲ ಪ್ರಯತ್ನದಲ್ಲಿ 66.95 ಮೀಟರ್ ಎಸೆದು ವಿಶ್ವದಾಖಲೆ ಬರೆದ ಅವರು, ತಮ್ಮ 2ನೇ ಅವಕಾಶದಲ್ಲಿ 68.08 ಮೀಟರ್ ಎಸೆದು ಮತ್ತೆ ತಮ್ಮದೇ ದಾಖಲೆ ವಿಸ್ತರಿಸಿಕೊಂಡರು.
ಮತ್ತೆ 5ನೇ ಪ್ರಯತ್ನದಲ್ಲಿ 68.55 ಮೀಟರ್ ಎಸೆದು ಒಂದೇ ಫೈನಲ್ಸ್ನಲ್ಲಿ 3 ಬಾರಿ ವಿಶ್ವದಾಖಲೆ ಬ್ರೇಕ್ ಮಾಡಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟರು. ಇದಕ್ಕೂ ಮೊದಲು 10 ಮೀಟರ್ ಏರ್ ರೈಫಲ್ನಲ್ಲಿ 19 ವರ್ಷದ ಅವಿನ ಲೇಖಾರಾ ಕೂಡ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ತಂದು ಕೊಟ್ಟಿದ್ದರು.
ಇದು ಸೋಮವಾರ ಭಾರತ ಗೆದ್ದ 5ನೇ ಪದಕವಾದರೆ, ಒಟ್ಟಾರೆ ಕ್ರೀಡಾಕೂಟದ 7ನೇ ಪದಕವಾಗಿದೆ. ಡಿಸ್ಕಸ್ ಥ್ರೋನಲ್ಲಿ ಕಂಚು ಗೆದ್ದಿದ್ದ ವಿನೋದ್ ಕುಮಾರ್ ಅವರು ಅನರ್ಹಗೊಂಡ ನಂತರ ಭಾರತ ತನ್ನ ಒಂದು ಪದಕ ಕಳೆದುಕೊಂಡಿದೆ.
2016ರಲ್ಲಿ 4 ಪದಕ ಗೆದ್ದಿದ್ದ ಭಾರತ ಈ ಬಾರಿ 7 ಪದಕದೊಡನೆ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಗರಿಷ್ಠ ಪದಕದ ಸಾಧನೆ ಮಾಡಿದೆ. ಇನ್ನು, ಜಾವಲಿನ್ F46 ವಿಭಾಗದಲ್ಲಿ ದೇವೇಂದ್ರ ಸಿಂಗ್ ಜಜಾರಿಯಾ ಬೆಳ್ಳಿ ಮತ್ತು ಸುಂದರ್ ಸಿಂಗ್ ಗುರ್ಜಾರ್ ಕಂಚಿನ ಪದಕ ಪಡೆದಿದ್ದರು.