ಟೋಕಿಯೋ(ಜಪಾನ್):ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿರುವ ಮಹಿಳಾ ವೇಟ್ ಲಿಫ್ಟರ್ ಮೀರಾಬಾಯಿ ಚನುಗೆ ಬೆಳ್ಳಿ ಬದಲು ಬಂಗಾರದ ಪದಕ ಸಿಗುವ ಸಾಧ್ಯತೆ ಇದೆ.
ಯಾವ ಕಾರಣಕ್ಕಾಗಿ ಚಿನ್ನದ ಪದಕ?
ಚಿನ್ನದ ಪದಕ ಪಡೆದುಕೊಂಡಿರುವ ಚೀನಾದ ಝಿಹೈ ಹು ಇದೀಗ ಟೋಕಿಯೋದಲ್ಲಿ ಡೋಪಿಂಗ್ ವಿರೋಧಿ ಪ್ರಾಧಿಕಾರದಿಂದ ಪರೀಕ್ಷೆಗೊಳಗಾಗಲಿದ್ದಾರೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅಲ್ಲಿನ ಅಧಿಕಾರಿಗಳು ಡೋಪಿಂಗ್ ಟೆಸ್ಟ್ ನಡೆಸುವ ಉದ್ದೇಶದಿಂದ ಝಿಹೈ ಹು ಅವರನ್ನು ಇಲ್ಲೇ ಉಳಿಸಿಕೊಳ್ಳಲಾಗಿದ್ದು, ಖಂಡಿತವಾಗಿ ಟೆಸ್ಟ್ ನಡೆಯಲಿದೆ ಎಂದಿದ್ದಾರೆ. ಟೆಸ್ಟ್ ವರದಿ ಪಾಸಿಟಿವ್ ಆಗಿ ಬಂದರೆ ಅವರಿಗೆ ನೀಡಿರುವ ಪದಕವನ್ನು ಭಾರತದ ಚನುಗೆ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.
ಬೆಳ್ಳಿ ಪದಕ ವಿಜೇತೆ ಮೀರಾ ಬಾಯಿ ಚಾನು
49 ಕೆ.ಜಿ ವಿಭಾಗದ ವೇಟ್ಲಿಫ್ಟಿಂಗ್ ಸ್ಪರ್ಧೆಯ ನಾಲ್ಕು ಸುತ್ತಿನಲ್ಲಿ ಭಾರತದ ಚನು ಒಟ್ಟು 202 ಕೆ.ಜಿ (ಸ್ನ್ಯಾಚ್‌ನಲ್ಲಿ 87 ಕೆ.ಜಿ ಮತ್ತು ಕ್ಲೀನ್ ಮತ್ತು ಜರ್ಕ್‌ನಲ್ಲಿ 115 ಕೆ.ಜಿ) ಎತ್ತಿದ್ದರು. ಆದರೆ ಚೀನಾದ ಝಿಹೈ ಹು ಒಟ್ಟು 210 ಕೆ.ಜಿ ತೂಕ ಎತ್ತಿ ಚಿನ್ನದ ಪದಕ ಗಳಿಸಿದ್ದರು. ಉಳಿದಂತೆ ಇಂಡೋನೇಷ್ಯಾದ ವಿಂಡಿ ಕ್ಯಾಂಟಿಕಾ ಐಸಾ ಒಟ್ಟು 194 ಕೆ.ಜಿ ತೂಕದೊಂದಿಗೆ ಕಂಚು ಪದಕ ಸಾಧನೆ ಮಾಡಿದ್ದರು.
ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತ ಇಲ್ಲಿಯವರೆಗೆ 1 ಪದಕ ಗೆಲ್ಲುವಲ್ಲಿ ಮಾತ್ರ ಯಶಸ್ವಿಯಾಗಿದ್ದು, ಇದೀಗ ಬ್ಯಾಡ್ಮಿಂಟನ್, ಬಾಕ್ಸಿಂಗ್ ಹಾಗೂ ಕುಸ್ತಿ ವಿಭಾಗದಲ್ಲಿ ಹೆಚ್ಚಿನ ಭರವಸೆ ಮೂಡಿದೆ.