ಟೋಕಿಯೋ:ಇಂದು ನಡೆದ ಬಾಕ್ಸಿಂಗ್ ಪಂದ್ಯದಲ್ಲಿ ಭಾರತೀಯ ಬಾಕ್ಸರ್ ಸತೀಶ್ ಕುಮಾರ್ +91 ಕೆಜಿ ವಿಭಾಗದಲ್ಲಿ ಜಮೈಕಾ ಆಟಗಾರ ರಿಕಾರ್ಡೊ ಬ್ರೌನ್ ಅವರನ್ನು ಸೋಲಿಸಿದರು. ಈ ಮೂಲಕ ಸತೀಶ್ ತಮ್ಮ ಚೊಚ್ಚಲ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಎರಡು ಬಾರಿಯ ಏಷ್ಯನ್ ಚಾಂಪಿಯನ್‌ಶಿಪ್‌ನ ಕಂಚಿನ ವಿಜೇತ ಸತೀಶ್ಗೆ ಪಂದ್ಯದ ಉದ್ದಕ್ಕೂ ಬ್ರೌನ್‌ರ ಕಳಪೆ ಆಟವೇ ಗೆಲುವಿಗೆ ಸಹಾಯಕವಾಯಿತು. ಹೀಗಾಗಿ ಅವರು 4-1 ಪಾಯಿಂಟ್ ಗಳಿಸುವ ಮೂಲಕ ತಮ್ಮ ಚೊಚ್ಚಲ ಒಲಿಂಪಿಕ್ ಕ್ರೀಡಾಕೂಟದ ಬಾಕ್ಸಿಂಗ್ನಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟರು.
ಆಗಸ್ಟ್ 1ರಂದು ವಿಶ್ವದ ಮತ್ತು ಏಷ್ಯಾದ ಚಾಂಪಿಯನ್ ಉಜ್ಬೇಕಿಸ್ತಾನದ ಬಖೋದಿರ್ ಜಲೋಲೋವ್ ವಿರುದ್ಧ 2018 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ವಿಜೇತ ಸತೀಶ್ ಕುಮಾರ್ ಕಣಕ್ಕಿಳಿಯಲಿದ್ದಾರೆ. ಜಲೋಲೋವ್ ಅಜರ್ಬೈಜಾನ್‌ನ ಮಹಮ್ಮದ್ ಅಬ್ದುಲ್ಲಾಯೇವ್ ಅವರನ್ನು 5-0 ಪಾಯಿಂಟ್ ಮೂಲಕ ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆದಿದ್ದಾರೆ.