ಲಖನೌ (ಉ.ಪ್ರ): ಯಶಸ್ವಿ ಪುರುಷನ ಹಿಂದೆ ಮಹಿಳೆಯೊಬ್ಬಳು ಇರುತ್ತಾರೆ ಎನ್ನುವುದಕ್ಕೆ ಪ್ಯಾರಾಲಿಂಪಿಕ್ನಲ್ಲಿ ಚಿನ್ನ ಗೆದ್ದ ಸುಹಾಸ್ ಯತಿರಾಜ್ ಕಥೆ ಸಹ ಉದಾಹರಣೆ. ಆತನ ಯಶಸ್ಸಿನ ಹಿಂದೆ ಪತ್ನಿ ರಿತು ಸುಹಾಸ್ ಸಹ ಬೆನ್ನೆಲುಬಾಗಿ ನಿಂತಿದ್ದಾರೆ. ಆದರೆ, ಆಕೆ ಸಹ ನಾಗರಿಕ ಸೇವಾ ಕ್ಷೇತ್ರದಲ್ಲಿಯೇ ಸೇವೆ ಸಲ್ಲಿಸುತ್ತಿದ್ದು, ಅಲ್ಲಿಯೂ ಹೆಸರು ಮಾಡಿದ್ದಾರೆ.
ಬಹುಮುಖ್ಯವಾಗಿ ಶಾಸಕ ಮುಖ್ತಾರ್ ಅನ್ಸಾರಿಯ ಅಕ್ರಮಗಳ ಹೊರಗೆಳೆಯುವಲ್ಲಿ ರಿತು ಸುಹಾಸ್ ಪಾತ್ರವೂ ಇದೆ. ರೌಡಿಶೀಟರ್, ಶಾಸಕ ಮುಖ್ತಾರ್ ಅನ್ಸಾರಿ ವಿರುದ್ಧ ಅಕ್ರಮ ಆಸ್ತಿ, ವಂಚನೆ ಆರೋಪವಿದ್ದು, ಈಗಾಗಲೇ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ.
ಸುಹಾಸ್ ಎಲ್‌ವೈ ಅವರು 2007 ನೇ ಬ್ಯಾಚ್‌ನ ಉತ್ತರ ಪ್ರದೇಶ ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದಾರೆ. ಸುಹಾಸ್ ಅವರ ಪತ್ನಿ ರಿತು ಸುಹಾಸ್ ಅವರು ಘಾಜಿಯಾಬಾದ್‌ನಲ್ಲಿ ಎಡಿಎಂ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕೂ ಮೊದಲು ಅವರು ಲಖನೌನಲ್ಲಿ ಅಭಿವೃದ್ಧಿ ಪ್ರಾಧಿಕಾರದಲ್ಲಿ ಜಂಟಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
2008ರಲ್ಲಿ ವಿವಾಹ
ರಿತು ಸುಹಾಸ್ ಮತ್ತು ಸುಹಾಸ್ ಯತಿರಾಜ್ 2008ರಲ್ಲಿ ವಿವಾಹವಾದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಪ್ಯಾರಾಲಿಂಪಿಕ್ನಲ್ಲಿ ಭಾರತದ ಪರ ಆಡಬೇಕೆಂದು ಯತಿರಾಜ್ ಆಸೆಯಾಗಿತ್ತು. ಇದಕ್ಕಾಗಿ ಕಳೆದ 6 ವರ್ಷಗಳಿಂದ ಅವರು ಕಷ್ಟಪಟ್ಟಿದ್ದಾರೆ ಎಂದು ರಿತು ಹೇಳಿದ್ದಾರೆ. ಟೋಕಿಯೋದಲ್ಲಿ ಪದಕ ಗೆದ್ದಾಗ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಯೋಗಿ ಆದಿತ್ಯನಾಥ್ ಕರೆ ಮಾಡಿ ಅಭಿನಂದಿಸಿದ್ದಾರೆ. ಇದು ಇನ್ನೊಂದು ಖುಷಿಯ ವಿಚಾರವಾಗಿದೆ. ಅವರ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ ಎಂದಿದ್ದಾರೆ.