ಕರ್ನಾಟಕ

karnataka

ETV Bharat / sports

ಕಾರಿನಿಂದ ಕ್ಯಾಷ್‌ಪ್ರೈಸ್‌ವರೆಗೂ.. ಚಿನ್ನದ ಹುಡುಗ ನೀರಜ್ ಚೋಪ್ರಾಗೆ ಬಹುಮಾನಗಳ ಸುರಿಮಳೆ..

ನಿನ್ನೆ ಮೊನ್ನೆವರೆಗೂ ಸಾಮಾನ್ಯ ಜನರಿಗೆ ಗೊತ್ತೇ ಇರದ ಹೆಸರು ನೀರಜ್‌ ಚೋಪ್ರಾ. ಆದರೆ, ನೀರಜ್‌ ಚೋಪ್ರಾ ಅನ್ನೋ ಹೆಸರು ಈಗ ಇಡೀ ವಿಶ್ವವ್ಯಾಪಿಯಾಗಿ ಖ್ಯಾತಿ ಪಡೆದಿದೆ. ಭಾರತದಲ್ಲಂತೂ ಸುಬೇದಾರ್‌ನಿಂದಾಗಿ ಸಂಭ್ರಮ ಹೆಚ್ಚಿದೆ. ಶತಮಾನದ ವ್ಯಕ್ತಿಯಾಗಿರುವ ವೀರಬಾಹುವಿಗೆ ಬಹುಮಾನಗಳ ಸುರಿಮಳೆಯಾಗ್ತಿದೆ..

It's pouring rewards for 'golden boy' Neeraj Chopra
ಚಿನ್ನದ ಹುಡುಗ ನೀರಜ್ ಚೋಪ್ರಾಗೆ ಬಹುಮಾನಗಳ ಸುರಿಮಳೆ

By

Published : Aug 8, 2021, 5:33 PM IST

ಟೋಕಿಯೊ ಒಲಿಂಪಿಕ್ಸ್​ 2020 ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಇತಿಹಾಸ ಬರೆದ ನೀರಜ್ ಚೋಪ್ರಾಗೆ ಬಹುಮಾನಗಳ ಮಹಾಪೂರವೇ ಹರಿದು ಬರುತ್ತಿದೆ. ಪುರುಷರ ಜಾವಲಿನ್ ಥ್ರೋ ಫೈನಲ್‌ನಲ್ಲಿ ಬಂಗಾರದ ಪದಕ ಗೆದ್ದಿರುವ ಹರಿಯಾಣದ ಚಿನ್ನದ ಹುಡುಗನಿಗೆ ಹಲವಾರು ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಸಂಸ್ಥೆಗಳು ಗೌರವಿಸಿವೆ.

ಹರಿಯಾಣ ಸರ್ಕಾರ

ಹರಿಯಾಣ ಮುಖ್ಯಮಂತ್ರಿ ಮನೋಹರ್​ ಲಾಲ್​ ಖಟ್ಟರ್ ಅವರು ತಮ್ಮ ರಾಜ್ಯದ ಪಾಣಿಪತ್​ ಮೂಲದ ಚೋಪ್ರಾಗೆ 6 ಕೋಟಿ ರೂ.ನಗದು ಬಹುಮಾನ, ಕ್ಲಾಸ್-1 ಉದ್ಯೋಗ, ಫ್ಲ್ಯಾಟ್​ ಕಟ್ಟಿಕೊಳ್ಳಲು ರಿಯಾಯಿತಿ ದರದಲ್ಲಿ ಜಾಗ ನೀಡುವುದಾಗಿ ಘೋಷಿಸಿದ್ದಾರೆ. 23 ವರ್ಷದ ನೀರಜ್ ಚೋಪ್ರಾರನ್ನು ಪಂಚಕುಲದಲ್ಲಿ ಸ್ಥಾಪನೆಯಾಗಲಿರುವ 'ಅಥ್ಲೆಟಿಕ್ಸ್ ಸೆಂಟರ್ ಫಾರ್ ಎಕ್ಸಲೆನ್ಸ್‌'ನ ಮುಖ್ಯಸ್ಥರನ್ನಾಗಿ ಮಾಡಲಾಗುವುದು ಎಂದೂ ಖಟ್ಟರ್ ತಿಳಿಸಿದ್ದಾರೆ.

ಪಂಜಾಬ್-ಮಣಿಪುರ ಸರ್ಕಾರ

ಇದು ಭಾರತಕ್ಕೆ ಹೆಮ್ಮೆಯ ಕ್ಷಣ ಎಂದಿರುವ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್, ಪಂಜಾಬ್‌ನಲ್ಲಿ ನೀರಜ್​ ಚೋಪ್ರಾ ಕುಟುಂಬದ ಮೂಲವಿದೆ ಎಂದು ಹೇಳಿ 2 ಕೋಟಿ ರೂ. ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. 100 ವರ್ಷಗಳ ನಂತರ ಒಲಿಂಪಿಕ್ಸ್‌ನ ಅಥ್ಲೆಟಿಕ್‌ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ನೀರಜ್​ ಚೋಪ್ರಾಗೆ ಮಣಿಪುರ ರಾಜ್ಯ ಸಂಪುಟ 1 ಕೋಟಿ ರೂ. ನೀಡಲು ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಹೇಳಿದ್ದಾರೆ.

ಬಿಸಿಸಿಐ - ಸಿಎಸ್​ಕೆ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೂಡ ಚೋಪ್ರಾಗೆ 1 ಕೋಟಿ ರೂ. ನಗದು ಬಹುಮಾನ ಘೋಷಿಸಿದೆ. ನೀರಜ್​ರ ಅದ್ಭುತ ಸಾಧನೆಗೆ ಮೆಚ್ಚುಗೆ ಮತ್ತು ಗೌರವದ ಸಂಕೇತವಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ (CSK) ಕೂಡ ಕ್ರೀಡಾಪಟುವಿಗೆ 1 ಕೋಟಿ ರೂ. ನಗದು ಬಹುಮಾನ ನೀಡುವುದಾಗಿ ತಿಳಿಸಿದೆ.

ಇಂಡಿಗೋ

ಭಾರತೀಯ ವಿಮಾನಯಾನ ಸಂಸ್ಥೆ ಇಂಡಿಗೋ ಚೋಪ್ರಾಗೆ ಒಂದು ವರ್ಷದವರೆಗೆ ಅನಿಯಮಿತ ಉಚಿತ ಪ್ರಯಾಣವನ್ನು ನೀಡುವುದಾಗಿ ಘೋಷಿಸಿದೆ. ಈ ಕೊಡುಗೆಯು ಆಗಸ್ಟ್ 8, 2021 ರಿಂದ ಆಗಸ್ಟ್ 7, 2022ರವರೆಗೆ ಅನ್ವಯವಾಗುತ್ತದೆ ಎಂದು ಇಂಡಿಗೋ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೊನೊಜೊಯ್ ದತ್ತಾ ಹೇಳಿದ್ದಾರೆ.

ಆನಂದ್ ಮಹೀಂದ್ರಾ

ಉದ್ಯಮಿ, ಮಹೀಂದ್ರಾ ಕಂಪನಿ ಮಾಲೀಕ ಆನಂದ್ ಮಹೀಂದ್ರಾ ಅವರು ಕೂಡ XUV 700 ದುಬಾರಿ ಕಾರು ಗಿಫ್ಟ್​ ನೀಡುವುದಾಗಿ ಘೋಷಿಸುವ ಮೂಲಕ ಚಿನ್ನ ಗೆದ್ದು ದೇಶದ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಬೆಳಗಿದ ನೀರಜ್​ಗೆ ಶುಭಾಶಯ ಕೋರಿದ್ದಾರೆ.

ಕೆಎಸ್ಆರ್​​​ಟಿಸಿ

60 ವಸಂತಗಳನ್ನು ಪೂರೈಸುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಇದರ ಸವಿ ನೆನಪಿನಲ್ಲಿ ಅಥ್ಲೀಟ್​ ನೀರಜ್ ಚೋಪ್ರಾಗೆ ಗೋಲ್ಡನ್ ಬಸ್ ಪಾಸ್‌ ನೀಡಲು ನಿರ್ಧರಿಸಿದೆ. ಇದರಂತೆ ಚೋಪ್ರಾ, ನಿಗಮದ ಯಾವುದೇ ಬಸ್ಸಿನಲ್ಲಿ ರಾಜ್ಯ ಹಾಗೂ ಅಂತಾರಾಜ್ಯಗಳಲ್ಲಿ ಜೀವಿತಾವಧಿವರೆಗೆ ಉಚಿತವಾಗಿ ಪ್ರಯಾಣಿಸಬಹುದಾಗಿದೆ.

ABOUT THE AUTHOR

...view details