ನವದೆಹಲಿ:57 ಕೆಜಿ ವಿಭಾಗದ ಕುಸ್ತಿಯ ಫೈನಲ್ ಪಂದ್ಯದಲ್ಲಿ ಹೋರಾಡಿ ಭಾರತದ ರವಿ ಕುಮಾರ್ ದಹಿಯಾ ಸೋಲು ಕಂಡಿದ್ದಾರೆ. ರಷ್ಯಾದ(ROC) ಜೌರ್ ಉಗುವ್ ವಿರುದ್ಧ 4-7 ಅಂತರದಿಂದ ಹಿನ್ನಡೆ ಅನುಭವಿಸಿ ನಿರಾಸೆಗೊಳಗಾಗಿದ್ದರೂ, ಭಾರತಕ್ಕೆ ಬೆಳ್ಳಿ ಪದಕ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಇವರು ಭಾರತಕ್ಕೆ ಬೆಳ್ಳಿ ಪದಕ ಗೆದ್ದುಕೊಡುತ್ತಿದ್ದಂತೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ರವಿ ಕುಮಾರ್ ದಹಿಯಾ ಓರ್ವ ಅದ್ಭುತ ಕುಸ್ತಿಪಟು. ಅವರ ಹೋರಾಟದ ಮನೋಭಾವ ಅತ್ಯುತ್ತಮವಾಗಿತ್ತು. ಟೋಕಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಕ್ಕಾಗಿ ಅಭಿನಂದನೆಗಳು. ನಿಮ್ಮ ಸಾಧನೆಯಿಂದ ಭಾರತ ಹೆಮ್ಮೆ ಪಡುವಂತಾಗಿದೆ ಎಂದು ತಿಳಿಸಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೂಡ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಕೆ ಮಾಡಿದ್ದು, ರವಿ ಕುಮಾರ್ ದಹಿಯಾ ಬೆಳ್ಳಿ ಪದಕ ಗೆದ್ದಿರುವುದಕ್ಕೆ ಭಾರತ ಹೆಮ್ಮೆ ಪಡುತ್ತಿದೆ. ತುಂಬಾ ಕಷ್ಟಕರ ಸನ್ನಿವೇಶಗಳ ಮಧ್ಯೆ ಕೂಡ ಇಂತಹ ಪ್ರದರ್ಶನ ನೀಡಿ, ಈ ಸಾಧನೆ ಮಾಡಿದ್ದೀರಿ. ನಿಜಕ್ಕೂ ನೀವೂ ನಿಜವಾದ ಚಾಂಪಿಯನ್ ಎಂದು ಟ್ವೀಟ್ ಮಾಡಿದ್ದಾರೆ.
ರವಿ ಕುಮಾರ್ ದಹಿಯಾ ಬೆಳ್ಳಿ ಪದಕಕ್ಕೆ ಮುತ್ತಿಡುತ್ತಿದ್ದಂತೆ ಅವರ ಸ್ವಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ. ಅವರು ಚಿನ್ನದ ಪದಕ ಗೆದ್ದಿಲ್ಲ. ಆದರೂ ಬೆಳ್ಳಿ ಪದಕಕ್ಕೆ ಮುತ್ತಿಕ್ಕುವ ಮೂಲಕ ದೇಶ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಸ್ವದೇಶಕ್ಕೆ ಮರಳುತ್ತಿದ್ದಂತೆ ಅವರಿಗೆ ಅದ್ಧೂರಿ ಸ್ವಾಗತ ಮಾಡಿಕೊಳ್ಳಲಾಗುವುದು ಎಂದಿದ್ದಾರೆ.