ಸೋನಿಪತ್(ಹರಿಯಾಣ):ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಕುಸ್ತಿಪಟು ರವಿ ಕುಮಾರ್ ದಹಿಯಾ ಮತ್ತೊಂದು ಪದಕ ಖಚಿತಪಡಿಸಿದ್ದಾರೆ. 57 ಕೆಜಿ ಕುಸ್ತಿ ವಿಭಾಗದಲ್ಲಿ ದಹಿಯಾ ಕಜಿಕಿಸ್ತಾನದ ನುರ್ಸ್ಲಿಮ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಫೈನಲ್ಗೆ ಲಗ್ಗೆ ಹಾಕಿದ್ದು, ಈ ಮೂಲಕ ಭಾರತಕ್ಕೆ ಇನ್ನೊಂದು ಪದಕ ಬರುವುದು ಕನ್ಫರ್ಮ್ ಆಗಿದೆ.
ಕುಸ್ತಿಪಟು ದಹಿಯಾ ಮನೆಯಲ್ಲಿ ಸಂಭ್ರಮ ಉದಯೋನ್ಮುಖ ಕುಸ್ತಿಪಟು ರವಿ ಕುಮಾರ್ ದಹಿಯಾ ಒಲಿಂಪಿಕ್ಸ್ ಇತಿಹಾಸದಲ್ಲೇ ಭಾರತಕ್ಕೆ ಮತ್ತೊಂದು ಪದಕ ತಂದು ಕೊಡುತ್ತಿರುವ ಐದನೇ ಭಾರತೀಯ ಕುಸ್ತಿಪಟು ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.
ಇಂದಿನ ಸೆಮಿಫೈನಲ್ ಪಂದ್ಯದಲ್ಲಿ ರವಿ ಕುಮಾರ್ ದಹಿಯಾ ಗೆಲುವು ಸಾಧಿಸುತ್ತಿದ್ದಂತೆ ಅವರ ಸೋನಿಪತ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಪಂದ್ಯ ವೀಕ್ಷಣೆ ಮಾಡುತ್ತಿದ್ದ ನೂರಾರು ಜನರು ಗೆಲುವು ಖಚಿತಗೊಳ್ಳುತ್ತಿದ್ದಂತೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಇದೇ ವಿಚಾರವಾಗಿ ಮಾತನಾಡಿರುವ ದಹಿಯಾ ತಂದೆ ರಾಕೇಶ್, ನನ್ನ ಮಗ ದೇಶ ಹೆಮ್ಮೆ ಪಡುವಂತಹ ಪ್ರದರ್ಶನ ನೀಡಿದ್ದಾರೆ. ರವಿ ಗೆದ್ದರೆ ಭಾರತ ಗೆದ್ದ ಹಾಗೇ. ನಾಳೆ ದೇಶಕ್ಕಾಗಿ ಚಿನ್ನದ ಪದಕ ಗೆದ್ದುಕೊಡುತ್ತಾರೆಂಬ ನಂಬಿಕೆ ಇದೆ ಎಂದಿದ್ದಾರೆ.
ಇನ್ನು ಮತ್ತೋರ್ವ ಕುಸ್ತಿಪಟು ದೀಪಕ್ ಪೂನಿಯಾ 86 ಕೆಜಿ ವಿಭಾಗದಲ್ಲಿ ಯುಎಸ್ಎ ಕ್ರೀಡಾಪಟು ವಿರುದ್ಧ ಸೆಮಿಫೈನಲ್ನಲ್ಲಿ ಸೋಲು ಕಂಡಿದ್ದು, ಇದೀಗ ಕಂಚಿಗಾಗಿ ಹೋರಾಟ ನಡೆಸಲಿದ್ದಾರೆ. ಭಾರತಕ್ಕೆ ಈಗಾಗಲೇ ವೇಟ್ ಲಿಫ್ಟಿಂಗ್, ಬ್ಯಾಡ್ಮಿಂಟನ್ ಹಾಗೂ ಬಾಕ್ಸಿಂಗ್ನಲ್ಲಿ ಪದಕ ಗೆದ್ದಿದ್ದು, ಇದೀಗ ಕುಸ್ತಿಯಲ್ಲಿ ಇನ್ನೊಂದು ಪದಕ ಖಚಿತಗೊಂಡಿದೆ.