ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಭರ್ಜರಿಯಾಗಿ ಶುಭಾರಂಭ ಮಾಡಿದ್ದಾರೆ. ಮೊದಲ ಗೇಮ್ ಅನ್ನು ಕೇವಲ 13 ನಿಮಿಷಗಳಲ್ಲಿ ಕೈವಶ ಮಾಡಿಕೊಂಡಿದ್ದ ಸಿಂಧು, ಆ ನಂತರವೂ ಅನಾಯಾಸವಾಗಿ ಆಟವಾಡಿ ಗೆಲುವು ದಾಖಲಿಸಿದ್ದಾರೆ.
ಮೊದಲ ಸುತ್ತಿನ ಪಂದ್ಯದಲ್ಲಿ ಇಸ್ರೇಲಿನ ಕೆಸ್ನಿಯಾ ಪೊಲಿಕರ್ಪೊವಾ ಎದುರು 21-7, 21-10 ನೇರ ಗೇಮ್‌ಗಳಲ್ಲಿ ಗೆಲುವು ದಾಖಲಿಸುವ ಮೂಲಕ ಸುಲಭವಾಗಿ ಪಂದ್ಯದಲ್ಲಿ ಪ್ರಾಬಲ್ಯ ಮೆರೆದರು. ಗ್ರೂಪ್ 'ಜೆ'ನಲ್ಲಿ ಸ್ಥಾನ ಪಡೆದಿರುವ ಸಿಂಧು ಮೊದಲ ಗೇಮ್‌ನಲ್ಲಿ 13 ಅಂಕಗಳ ಭಾರಿ ಅಂತರದ ಗೆಲುವು ದಾಖಲಿಸಿದರು. ಎರಡನೇ ಸೆಟ್‌ನಲ್ಲಿ ಇಸ್ರೇಲಿ ಆಟಗಾರ್ತಿ ಕೊಂಚ ತಿರುಗೇಟು ನೀಡಲು ಯತ್ನಿಸಿದರಾದರೂ ಭಾರತೀಯ ಚಾಂಪಿಯನ್ ಆಟಗಾರ್ತಿಯ ಎದುರು ಪ್ರಾಬಲ್ಯ ಮೆರೆಯಲು ಸಾಧ್ಯವಾಗಲಿಲ್ಲ.