ಹೈದರಾಬಾದ್: ಭಾರತಕ್ಕೆ ಟೋಕಿಯೋ ಒಲಿಂಪಿಕ್ಸ್ನಲ್ಲಿ ಕಂಚು ಗೆದ್ದುಕೊಡುವ ಮೂಲಕ ಒಲಿಂಪಿಕ್ಸ್ನಲ್ಲಿ ಸತತ ಎರಡು ಪದಕ ಗೆದ್ದಿರುವ ಬ್ಯಾಡ್ಮಿಂಟನ್ ಪಿ ವಿ ಸಿಂಧು ಬುಧವಾರ ಹೈದರಾಬಾದ್ಗೆ ಮರಳಿದ್ದಾರೆ. ಸ್ವತಃ ತೆಲಂಗಾಣ ಕ್ರೀಡಾ ಸಚಿವ ಶ್ರೀನಿವಾಸ ಗೌಡ ಶಂಷಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಿ ಪದಕ ವಿಜೇತೆಯನ್ನು ಸ್ವಾಗತಿಸಿದರು.
ಸುಚಿತ್ರ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಆಯೋಜಿಸಿದ್ದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಪಿ ವಿ ಸಿಂಧು, ದೇಶಕ್ಕಾಗಿ ಪದಕ ತಂದುಕೊಟ್ಟಿರುವುದು ನನಗೆ ಹೆಮ್ಮೆಯನ್ನಿಸುತ್ತಿದೆ. ನಿಮ್ಮೆಲ್ಲರ ಪ್ರೋತ್ಸಾಹದಿಂದ ಭವಿಷ್ಯದಲ್ಲೂ ಮತ್ತಷ್ಟು ವಿಜಯ ಸಾಧಿಸುವುದಕ್ಕೆ ನನಗೆ ಪ್ರೇರಣೆ ನೀಡಿದೆ. ರಾಜ್ಯ ಸರ್ಕಾರ ಕ್ರೀಡಾಪಟುಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ. ಇದು ಹೀಗೆ ಮುಂದುವರಿಯಲಿ. ನನಗೆ ಈ ಪಯಣದಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದವನ್ನು ತಿಳಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ರಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದ ಮೇಲೆ ನನ್ನ ಮೇಲಿನ ಭರವಸೆ ಕೂಡ ಹೆಚ್ಚಾಗಿತ್ತು. ಎಲ್ಲರ ನಂಬಿಕೆಯನ್ನು ಉಳಿಸಿಕೊಳ್ಳಲು ಸಾಕಷ್ಟು ಶ್ರಮಪಟ್ಟಿದ್ದೇನೆ. ಇದು ಇಷ್ಟಕ್ಕೆ ಮುಗಿಯುವುದಿಲ್ಲ, ಹೀಗೆ ಮುಂದುವರಿಯಲಿದೆ. 2024ರ ಪ್ಯಾರೀಸ್ ಒಲಿಂಪಿಕ್ಸ್ನಲ್ಲಿ ಖಂಡಿತ ಆಡುತ್ತೇನೆ. ಅಲ್ಲಿ ಚಿನ್ನದ ಪದಕ ಗೆಲ್ಲಲು ಶೇ.100 ಪ್ರಯತ್ನ ಪಡುತ್ತೇನೆ. ಸದ್ಯಕ್ಕೆ ಈ ಕ್ಷಣವನ್ನು ಆನಂದಿಸುತ್ತೇನೆ ಎಂದರು.