ಟೋಕಿಯೋ: ಭಾರತ ಹಾಕಿ ತಂಡ ಗುರುವಾರ ಜರ್ಮನಿಯನ್ನು 5-4 ಗೋಲುಗಳ ಅಂತರದಲ್ಲಿ ಮಣಿಸುವ ಮೂಲಕ 41 ವರ್ಷಗಳ ಬಳಿಕ ಒಲಿಂಪಿಕ್ಸ್ನಲ್ಲಿ ಪದಕ ಸಾಧನೆ ಮಾಡಿದ್ದು, ಈ ಸಂಭ್ರಮದ ಭಾಗವಾಗುತ್ತಿರುವುದು ನನಗೆ ಸಿಕ್ಕ ಅದೃಷ್ಟ ಎಂದು ಟೀಮ್ ಇಂಡಿಯಾ ಕೋಚ್ ಆಗಿರುವ ಆಸ್ಟ್ರೇಲಿಯಾದ ಗ್ರಹಾಂ ರೀಡ್ ಸಂತಸ ವ್ಯಕ್ತಪಡಿಸಿದ್ದಾರೆ.
1992ರ ಬಾರ್ಸಿಲೋನಾ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಗೆದ್ದ ಆಸ್ಟ್ರೇಲಿಯಾ ತಂಡದ ಭಾಗವಾಗಿದ್ದ ಗ್ರಹಾಂ 2019ರಲ್ಲಿ ಭಾರತ ತಂಡದ ಕೋಚ್ ಆಗಿ ನೇಮಮಗೊಂಡಿದ್ದರು. ಯುವಕರಲ್ಲಿ ಗೆಲುವಿನ ಗೀಳನ್ನು ತುಂಬಿದ್ದ ಅವರು ಇಂದು ಒಲಿಂಪಿಕ್ಸ್‌ನಂತಹ ದೊಡ್ಡ ಹಂತದಲ್ಲಿ ಪದಕ ಪಡೆಯಲು ನೆರವಾಗಿದ್ದಾರೆ.
" ಇದೊಂದು ಅದ್ಭುತ ಭಾವನೆ, ಇಡೀ ತಂಡ ಮಾಡಿದ ಸಾಕಷ್ಟು ತ್ಯಾಗಗಳ ಪ್ರತಿಫಲವಾಗಿ ಇದು ಸಂದಿದೆ. ಇಂದು ಆಟಗಾರರು ಎಲ್ಲಿಗೆ ತಲುಪಿದ್ದಾರೋ ಅದರ ಹಿಂದೆ ಅವರೆಲ್ಲರ ತ್ಯಾಗವಿದೆ" ಎಂದು ರೀಡ್ ಆಟಗಾರರು ಮತ್ತು ಸಿಬ್ಬಂದಿ ಹಲವು ತಿಂಗಳುಗಳಿಂದ ತಮ್ಮ ಕುಟುಂಬದಿಂದ ದೂರ ಉಳಿದು ಒಲಿಂಪಿಕ್ಸ್ಗಾಗಿ ಪಟ್ಟ ಶ್ರಮವನ್ನು ಉಲ್ಲೇಖಿಸಿ ಮತ್ತು ಕೋವಿಡ್ -19 ವಿರುದ್ಧ ಹೋರಾಡಿದ್ದನ್ನು ಸ್ಮರಿಸಿ ಹೇಳಿದರು.