ನವದೆಹಲಿ: ಟೋಕಿಯೋ ಒಲಿಂಪಿಕ್ಸ್ನ ಸೆಮಿಫೈನಲ್ ಹಾಕಿ ಪಂದ್ಯದಲ್ಲಿ ಭಾರತದ ಮಹಿಳಾ ತಂಡ ಅರ್ಜೆಂಟೀನಾ ವಿರುದ್ಧ 2-1 ಅಂತರದಿಂದ ಸೋಲು ಕಾಣುವ ಮೂಲಕ ನಿರಾಸೆಗೊಳಗಾಗಿದೆ. ಇದೀಗ ಕಂಚಿನ ಪದಕಕ್ಕಾಗಿ ಗ್ರೇಟ್ ಬ್ರಿಟನ್ ವಿರುದ್ಧ ನಾಳೆ ಸೆಣಸಾಟ ನಡೆಸಲಿದೆ. ತಂಡ ಸೋಲುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ, ಮಹಿಳಾ ಹಾಕಿ ತಂಡದ ಕ್ಯಾಪ್ಟನ್ ರಾಣಿ ರಾಂಪಾಲ್ ಹಾಗೂ ಕೋಚ್ ಜೋರ್ಡ್ ಮರಿಜಿನ್ ಜೊತೆ ದೂರವಾಣಿ ಮೂಲಕ ಮಾತನಾಡಿದ್ದು, ಸೋಲಿನಿಂದ ನಿರಾಸೆಗೊಳಗಾಗಬೇಡಿ ಎಂದು ಧೈರ್ಯ ತುಂಬಿದ್ದಾರೆ.
ಸೋಲು - ಗೆಲುವು ತಂಡದ ಭಾಗವಾಗಿದ್ದು, ಅರ್ಜೇಂಟೀನಾ ವಿರುದ್ಧದ ಸೋಲಿನಿಂದ ನಿರಾಸೆಗೊಳಗಾಗಬೇಡಿ. ತಂಡದ ಪ್ರದರ್ಶನದಿಂದ ಇಡೀ ಭಾರತ ಹೆಮ್ಮೆ ಪಟ್ಟಿದೆ ಎಂದು ತಿಳಿಸಿದ್ದಾರೆ. ಪಂದ್ಯ ಆರಂಭಗೊಳ್ಳುತ್ತಿದ್ದಂತೆ ರಾಣಿ ರಾಂಪಾಲ್ ಪಡೆ 1 ಗೋಲು ಗಳಿಕೆ ಮಾಡಿ ಮುನ್ನಡೆ ಪಡೆದುಕೊಂಡಿತ್ತು. ಇದಾದ ಬಳಿಕ ಸವಾರಿ ಮಾಡಿದ ಅರ್ಜೇಂಟಿನಾ 2 ಗೋಲು ಗಳಿಕೆ ಮಾಡಿ ಮುನ್ನಡೆ ಪಡೆದುಕೊಂಡಿತು. ಇದಾದ ಬಳಿಕ ಭಾರತದ ಮಹಿಳಾ ತಂಡ ಯಾವುದೇ ಗೋಲು ಗಳಿಕೆ ಮಾಡಲು ಶಕ್ತವಾಗಲಿಲ್ಲ. ಹೀಗಾಗಿ ಸೋಲು ಕಾಣುವಂತಾಯಿತು.