ಟೋಕಿಯೊ (ಜಪಾನ್):ಭಾರಿ ನಿರೀಕ್ಷೆ ಹುಟ್ಟಿಸಿದ್ದ ಭಾರತದ ಪುರುಷರ ಹಾಕಿ ತಂಡವು ಟೋಕಿಯೊ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದು ಸಂಭ್ರಮಿಸಿದೆ. ಜರ್ಮನಿ ತಂಡದ ವಿರುದ್ಧ 5-4 ಗೋಲುಗಳ ಅಂತರದಿಂದ ಗೆಲುವು ಸಾಧಿಸಿದ ಹಾಕಿ ತಂಡಕ್ಕೆ ಗಣ್ಯರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್, 41 ವರ್ಷಗಳ ನಂತರ ಹಾಕಿಯಲ್ಲಿ ಒಲಿಂಪಿಕ್ ಪದಕ ಗೆದ್ದ ನಮ್ಮ ಪುರುಷರ ಹಾಕಿ ತಂಡಕ್ಕೆ ಅಭಿನಂದನೆಗಳು. ತಂಡದ ಅಸಾಧಾರಣ ಕೌಶಲ್ಯ ತೋರಿದೆ. ಈ ಐತಿಹಾಸಿಕ ವಿಜಯವು ಹಾಕಿಯಲ್ಲಿ ಹೊಸ ಯುಗವನ್ನು ಪ್ರಾರಂಭಿಸುತ್ತದೆ ಎಂದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಇದು ಪ್ರತಿಯೊಬ್ಬ ಭಾರತೀಯನ ನೆನಪಿನಲ್ಲಿ ಉಳಿಯುವಂತಹ ಐತಿಹಾಸಿಕ ದಿನ. ಭಾರತಕ್ಕೆ ಕಂಚು ತಂದ ಪುರುಷರ ಹಾಕಿ ತಂಡಕ್ಕೆ ಅಭಿನಂದನೆಗಳು. ದೇಶ ಹಾಕಿ ತಂಡದ ಬಗ್ಗೆ ಹೆಮ್ಮೆಪಡುತ್ತದೆ ಎಂದಿದ್ದಾರೆ.